ಚಿಕ್ಕೋಡಿ(ಬೆಳಗಾವಿ): ಎಟಿಎಂನಲ್ಲಿ ಹಣ ತೆಗೆಯುವಾಗ ಸಹಾಯದ ನೆಪದಲ್ಲಿ ವಂಚನೆ ಮಾಡುತ್ತಿದ್ದ ವ್ಯಕ್ತಿಯನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ. ಆತನ ಬಳಿಯಿದ್ದ 51 ವಿವಿಧ ಬ್ಯಾಂಕ್ಗಳ ಎಟಿಎಂ ಕಾರ್ಡ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಮಹಾರಾಷ್ಟ್ರ ಮೂಲದ ಅಮುಲ್ ದಿಲೀಪ್ ಸಖಟೆ (30) ಬಂಧಿತ ಆರೋಪಿ. ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ಗೋಕಾಕ್ ಹಾಗೂ ಬಾಗಲಕೋಟೆ ಸೇರಿದಂತೆ ಇತರ ರಾಜ್ಯಗಳಲ್ಲಿನ ಎಟಿಎಂನಲ್ಲಿ ಹಣ ತೆಗೆಯುವಾಗ ಸಹಾಯ ಮಾಡುವುದಾಗಿ ಹೇಳಿ, ಬಳಿಕ ಎಟಿಎ ಕಾರ್ಡ್ ಬದಲಿಸಿ ವಂಚನೆ ಮಾಡುತ್ತಿದ್ದನು. ಇತ್ತೀಚಿಗೆ ಚಿಕ್ಕೋಡಿ ಪಟ್ಟಣದಲ್ಲಿ ವಿಜಯ ರಾಣಪ್ಪಾ ಡಾಲೆ ಎಂಬುವರಿಗೆ ಆರೋಪಿ ಸಹಾಯ ಮಾಡುವ ರೂಪದಲ್ಲಿ ಮಕ್ಮಲ್ ಟೋಪಿ ಹಾಕಿದ್ದ.
ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಅಥಣಿ, ಚಿಕ್ಕೋಡಿ, ಗೋಕಾಕ್ ಬಾಗಲಕೋಟೆ ಹಾಗೂ ಮಹಾರಾಷ್ಟ್ರದಲ್ಲಿ ಇದೇ ರೀತಿ ವಂಚನೆ ಪ್ರಕರಣಗಳು ದಾಖಲಾಗಿವೆ. ಬಂಧಿತನಿಂದ ಒಟ್ಟು 51 ವಿವಿಧ ಬ್ಯಾಂಕ್ಗಳ ಎಟಿಎಂ ಕಾರ್ಡ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ತನಿಖೆ ಮುಂದುವರೆಸಿದ್ದಾರೆ.
Laxmi News 24×7