ಮೈಸೂರು: ಈಗ ದೇಶದೆಲ್ಲೆಡೆ ಆತ್ಮ ನಿರ್ಭರ ಭಾರತದ ಸದ್ದಿದೆ. ಈ ಬಾರಿ ದಸರೆಯಲ್ಲೂ ಆತ್ಮ ನಿರ್ಭರ ಭಾರತದ ಮಾತು ಬೆಳಕಿನ ರೂಪದಲ್ಲಿ ಪ್ರಜ್ವಲಿಸಲಿದೆ. ಅಂದರೆ ದಸರಾಗೆ ಚೈನಾ ಬಲ್ಬ್‌ಗಳನ್ನು ಬ್ಯಾನ್ ಮಾಡಲಾಗಿದೆ.ದಸರಾಗೆ ದಿನಗಣನೆ ಆರಂಭವಾಗಿದೆ. ಹೀಗಾಗಿ ದಸರಾ ಸಿದ್ಧತೆಯೂ ಜೋರಾಗಿದೆ. ಅರಮನೆಯ ದೀಪಾಲಂಕಾರಕ್ಕಾಗಿ ಬಲ್ಬ್‌ಗಳ ಪರಿಶೀಲನೆ ಹಾಗೂ ಕೆಟ್ಟು ಹೋದ ಬಲ್ಬ್‌ಗಳನ್ನು ಬದಲಾಯಿಸುವ ಕೆಲಸ ಆರಂಭವಾಗಿದೆ. ಈ ಬಾರಿ ಮೈಸೂರು ದಸರಾ ದೀಪಾಲಂಕಾರದ ವಿಶೇಷತೆಯೆಂದರೆ ಆತ್ಮ ನಿರ್ಭರ ಭಾರತಕ್ಕೆ ಒತ್ತು ಕೊಡಲಾಗಿದೆ.
ಈ ಬಾರಿಯ ದಸರೆಯ ದೀಪಾಲಂಕಾರದಲ್ಲಿ ಚೈನಾದ ಬಲ್ಬ್‌ಗಳನ್ನು ಬಳಸದಿರಲು ನಿರ್ಧರಿಸಲಾಗಿದೆ. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ಈಗಾಗಲೇ ಚೈನಾ ಆ್ಯಪ್‍ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಇದೀಗ ಮೈಸೂರು ದಸರೆಯಲ್ಲಿ ಚೈನಾ ಬಲ್ಬ್‌ಗಳನ್ನು ಬ್ಯಾನ್ ಮಾಡಲಾಗುತ್ತಿದೆ.
ಮೈಸೂರು ದಸರಾ ವೇಳೆ 60 ರಿಂದ 75 ಕಿಲೋಮೀಟರ್ ಉದ್ದದ ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗುತ್ತದೆ. 150ಕ್ಕೂ ಹೆಚ್ಚು ವೃತ್ತಗಳು ಜಗಮಗಿಸುತ್ತಿರುತ್ತದೆ. ಇದಕ್ಕಾಗಿ ಮುಂಬೈ, ದೆಹಲಿ ಮತ್ತು ಕೊಲ್ಕತ್ತಾದಿಂದ ಬಲ್ಬ್‌ಗಳು ಹಾಗೂ ವಿವಿಧ ಬಿಡಿಭಾಗಗಳನ್ನು ತರಿಸಿಕೊಳ್ಳಲಾಗುತ್ತದೆ. ಈ ಬಾರಿ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಚೀನಾದ ಯಾವುದೇ ವಸ್ತುಗಳನ್ನು ದಸರಾ ದೀಪಾಲಂಕಾರದಲ್ಲಿ ಬಳಸದಿರಲು ನಿರ್ಧರಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ ತಿಳಿಸಿದ್ದಾರೆ.