ಇವರೆಲ್ಲಾ ಮಾರ್ಕಂಡೇಯ ಡ್ಯಾಮ್ ಕಟ್ಟಲು ತಮ್ಮ ಇದ್ದ ಭೂಮಿಯನ್ನೇ ಬಿಟ್ಟು ಕೊಟ್ಟವರು. ಆದರೆ ಇಂದು ಸರಿಯಾದ ಸೂರು ಇಲ್ಲದೇ, ಊರು ಇಲ್ಲದೇ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಇದರಿಂದ ರೊಚ್ಚಿಗೆದ್ದಿರುವ ಸಂತ್ರಸ್ತರು ಪುನರ್ವಸತಿ ಕಲ್ಪಿಸಿ ತಮ್ಮ ಗ್ರಾಮವನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಹೋರಾಟದ ಹಾದಿ ಹಿಡಿದಿದ್ದಾರೆ.
ಮಾರ್ಕಂಡೇಯ ನದಿಯ ಹಿನ್ನಿರಿನಲ್ಲಿ 2002ರಲ್ಲಿ ಮುಳುಗಡೆ ಆಗಿರುವ ಬೆಳಗಾವಿ ತಾಲೂಕಿನ ಪಣಗುತ್ತಿ ಗ್ರಾಮದ ಜನರು ಅಂದು ಭೂಮಿ ಕಳೆದುಕೊಂಡಿದ್ದರು. ಇದೀಗ ಇಲ್ಲಿನ ಸಂತ್ರಸ್ತರು ಹೆಚ್ಚಿನ ಪ್ರಮಾಣದಲ್ಲಿ ನೀರು ಗ್ರಾಮದಲ್ಲಿ ಶೇಖರಣೆ ಆಗಿದ್ದರಿಂದ ಮನೆಗಳು ಕುಸಿದು ಜೀವ ಕಳೆದುಕೊಳ್ಳುವ ಭೀತಿಯಲ್ಲಿ ಕಾಲ ದೂಡುತ್ತಿದ್ದಾರೆ.
ಅಲ್ಲದೇ ಪಣಗುತ್ತಿ ಗ್ರಾಮದ ಜೊತೆಗೆ ಮುಳುಗಡೆಯಾದ 8 ಗ್ರಾಮಗಳಿಗೆ ಸರ್ಕಾರ ಪುನರ್ವಸತಿ ಕಲ್ಪಿಸಿಕೊಟ್ಟಿದೆ. ಆದರೆ ಪಣಗುತ್ತಿ ಗ್ರಾಮವನ್ನು ಮಾತ್ರ ಸರ್ಕಾರ ಕಡೆಗಣಿಸಿದೆ. ಇದರಿಂದ ಆಕ್ರೋಶಗೊಂಡಿರುವ ಪಣಗುತ್ತಿ ಗ್ರಾಮಸ್ಥರು ಸೋಮವಾರ ಬೆಳಗಾವಿಯ ನೀರಾವರಿ ನಿಗಮದ ಮುಖ್ಯ ಅಭಿಯಂತರರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಗ್ರಾಮಸ್ಥರು 2002ರಿಂದ ಇಂದು ಆಗುತ್ತೆ, ನಾಳೆ ಆಗುತ್ತೆ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಬರೀ ಆಶ್ವಾಸನೆ ಕೊಡುತ್ತಾ ಬಂದಿದ್ದಾರೆ. 8 ಊರು ಸ್ಥಳಾಂತರ ಮಾಡಿದ್ದಾರೆ. ಆದರೆ ನಮ್ಮೂರು ಮಾಡಿಲ್ಲ. ಪಂಚಾಯತಿಯವರಿಗೆ ಎಷ್ಟು ಬಾರಿ ಎಚ್ಚರಿಕೆ ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ.
ಈಗ ಊರಿನಲ್ಲಿ ಜವಳ ಹಿಡಿದು ಬಿಟ್ಟಿದೆ. ಸತೀಶ ಜಾರಕಿಹೊಳಿ ಅವರು ಕೂಡ ಬಂದು ವಿಚಾರಣೆ ಮಾಡಿ ಹೋಗಿದ್ದಾರೆ. ಎಸ್‍ಟಿ ಜನಾಂಗದವರೇ ಹೆಚ್ಚಾಗಿ ಪಣಗುತ್ತಿಯಲ್ಲಿ ವಾಸಿಸುತ್ತಿದ್ದೇವೆ. ಭೂಮಿ ಎಲ್ಲಾ ಹೋಗಿದೆ ಊರು ಅಷ್ಟೇ ಉಳಿದಿದೆ. ನಮಗೆ ಪರಿಹಾರ ಕೊಟ್ಟು ಪುನರ್ವಸತಿ ಮಾಡಬೇಕು ಎಂದು ಆಗ್ರಹಿಸಿದರು.