ಉಡುಪಿ, ಸೆಪ್ಟೆಂಬರ್, 25: ಕಸ ಸಂಗ್ರಹಕಾರರು ಅಂದರೆ ಸಮಾಜದಲ್ಲಿ ಕೀಳರಿಮೆ ಜಾಸ್ತಿ. ಅದರಲ್ಲೂ ನಾವೇ ಸೃಷ್ಟಿಸಿದ ಕಸ, ತ್ಯಾಜ್ಯ ತುಂಬಿದ ವಾಹನ ರಸ್ತೆಯಲ್ಲಿ ಹೋಗುತ್ತಿದ್ದರೆ ಮೂಗು ಮುಚ್ಚಿ ಹೋಗುವವರೇ ಸಂಖ್ಯೆಯ ಅಧಿಕವಾಗಿದೆ. ಕಸ ಎತ್ತುವ ಸ್ವಚ್ಛತೆಯ ಸೈನಿಕರ ಬಗ್ಗೆ ಜನರಿಗಿದ್ದ ಕೀಳರಿಮೆಯನ್ನು ಹೋಗಲಾಡಿಸಲು ಉಡುಪಿಯ ಐಎಎಸ್ ಪ್ರಸನ್ನ ಎನ್ನುವವರು ಮುಂದಾಗಿದ್ದಾರೆ.
ದಿನವಿಡೀ ತ್ಯಾಜ್ಯ ವಿಲೇವಾರಿ ಸಿಬ್ಬಂದಿ ಜೊತೆಗಿದ್ದು, ಅವರ ಜೊತೆ ಮನೆಮನೆಗೆ ಹೋಗಿ ಕಸ ಸಂಗ್ರಹಿಸಿ, ಕಸ ತುಂಬಿದ ವಾಹನವನ್ನೂ ಚಲಾಯಿಸಿ ಗಮನ ಸೆಳೆದರು. ಈ ಮೂಲಕ ಅಧಿಕಾರಿ ವರ್ಗಕ್ಕೆ ಮಾದರಿ ಆಗಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಐಎಎಸ್ ಅಧಿಕಾರಿ ಪ್ರಸನ್ನ ಅವರು ಬಡಗುಬೆಟ್ಟು ಗ್ರಾಮ ಪಂಚಾಯತ್‌ನ ತ್ಯಾಜ್ಯ ವಿಲೇವಾರಿಯ ಕಾರ್ಮಿಕರ ಜೊತೆಗಿದ್ದು, ಅವರಿಗೆ ಆತ್ಮಸ್ಥೈರ್ಯ ತುಂಬುತ್ತಾ, ಇತರೆ ಅಧಿಕಾರಿಗಳಿಗೆ ಮಾದರಿ ಆಗಿದ್ದಾರೆ. ಬಡಗುಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಣೆ ಸರಿಯಾಗಿ ಆಗುತ್ತಿಲ್ಲ. ಜನ ಕಸವನ್ನು ಗ್ರಾಮ ಪಂಚಾಯತ್‌ನ ಸ್ವಚ್ಛತಾ ವಾಹನಕ್ಕೆ ಹಾಕದೇ ರಸ್ತೆಯಲ್ಲಿ ಬಿಸಾಡುತ್ತಿರುವ ಎನ್ನುವ ಆರೋಪಗಳು ಕೇಳಿಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಪಸನ್ನ ತಾವೇ ಸ್ವತಃ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಪ್ರತಿಯೊಂದು ಮನೆಗೆ ತೆರಳಿ ಪ್ರಸನ್ನ ಅವರು ಪರಿಶೀಲನೆ ಮಾಡಿದ್ದಾರೆ. ಐಎಎಸ್ ಅಧಿಕಾರಿಯಾದರೂ ಯಾವುದೇ ಅಹಂಕಾರವಿಲ್ಲದೆ ಜನರಿಗೆ ಸ್ವಚ್ಛತೆಯ ಪಾಠವನ್ನು ಮಾಡಿದ್ದಾರೆ. ಐಎಎಸ್ ಅಧಿಕಾರಿಯ ಈ ಉತ್ತಮ ನಡೆ ಜನ ಮೆಚ್ಚುಗೆ ಪಡೆದಿದೆ.