ಅಹಮದಾಬಾದ್ : ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಗುಜರಾತ್‌ನಲ್ಲಿ 80% ಖಾಸಗಿ ಉದ್ಯೋಗಗಳು ಗುಜರಾತ್‌ನ ಜನರಿಗೆ ಮೀಸಲಾಗಿರುತ್ತವೆ ಎಂದು ಆಪ್ ಸಂಚಾಲಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾನುವಾರ ಘೋಷಿಸಿದ್ದಾರೆ.
ಟೌನ್‌ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಜರಾತ್‌ನ ಯುವ ಸಮುದಾಯದೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಜ್ರಿವಾಲ್, ‘ಕಮಲ’ದ ಸುತ್ತ ಸಾಕಷ್ಟು ‘ಕೆಸರು’ ಬಿದ್ದಿದೆ. ಆ ಕೆಸರನ್ನು “ಕೈ” ಯಿಂದ ಸ್ವಚ್ಛಗೊಳಿಸಲು ಸಾಧ್ಯವಿಲ್ಲ, ಅದನ್ನು “ಪೊರಕೆ ” ಯಿಂದ ಸ್ವಚ್ಛಗೊಳಿಸಬೇಕಾಗುತ್ತದೆ ‘ ಎಂದು ಬಿಜೆಪಿ ಸಚಿವರೊಬ್ಬರು ತಮ್ಮ ಎಲ್ಲ ಕಾರ್ಯಕರ್ತರಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ’ ಎಂದು ಹೇಳಿದರು.
”ಕಳೆದ ವಾರ ನಾವು ವಡೋದರಾದಲ್ಲಿ ಶಿಕ್ಷಣದ ಬಗ್ಗೆ ಸಂವಾದ ನಡೆಸಿದ್ದೇವೆ. ಅವರು ನಮ್ಮ 13 ಹಾಲ್‌ಗಳನ್ನು ಸಿಗದಂತೆ ಮಾಡಿದ್ದಾರೆ. ಆಗ ನವನೀತ್ ಕಾಕಾ ಧೈರ್ಯವಾಗಿ ತಮ್ಮ ಸಭಾಂಗಣವನ್ನು ನಮಗೆ ನೀಡಿದರು. ನಿನ್ನೆ ಈ ಜನರು ಬುಲ್ಡೋಜರ್ ತೆಗೆದುಕೊಂಡು ನವನೀತ್ ಕಾಕಾ ಅವರ ಸಭಾಂಗಣವನ್ನು ಒಡೆಯಲು ಬಂದರು. ಇದಕ್ಕಿಂತ ದೊಡ್ಡ ಅಪರಾಧ ಇನ್ನೇನಿದೆ?”ಎಂದು ಕೇಜ್ರಿವಾಲ್ ಪ್ರಶ್ನಿಸಿದರು.
ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.