ಬೆಳಗಾವಿ: ಜಿಲ್ಲೆಯ ಬೆಳಗಾವಿ (Belgavi) ತಾಲೂಕಿನ ಜಾನುವಾರುಗಳಲ್ಲಿ ಚರ್ಮಗಂಟು ರೋಗ (Lumpy Skin Disease) (ಲಂಪಿ ಸ್ಕಿನ್ ಡಿಸೀಜ್)ಸಾಂಕ್ರಾಮಿಕ ಕಾಯಿಲೆ ಕಂಡು ಬಂದಿದ್ದು, ಇದು ಕ್ಯಾಪ್ರಿಸಾಕ್ಸ್ ಎಂಬ ವೈರಾಣುವಿನಿಂದ ಬರುತ್ತದೆ. ದನ, ಎಮ್ಮೆಗಳಲ್ಲಿ ಅದರಲ್ಲೂ ಮಿಶ್ರತಳಿ ರಾಸುಗಳಲ್ಲಿ, ಕರುಗಳಲ್ಲಿ ಅತಿ ಹೆಚ್ಚಾಗಿ ಹಾಗೂ ತೀಕ್ಷ್ಣವಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗವು ಮುಖ್ಯವಾಗಿ ದನಗಳಿಗೆ ಕಚ್ಚುವ ಕೀಟಗಳಿಂದ (ಸೊಳ್ಳೆ, ನೊಣ, ಉಣ್ಣೆ) ಇತ್ಯಾದಿಗಳಿಂದ ಬಹುಬೇಗ ಹರಡುತ್ತದೆ. ಮಳೆಗಾಲದಲ್ಲಿ (Rainy Season) ಮತ್ತು ನಂತರದ ದಿನಗಳಲ್ಲಿ ಹೆಚ್ಚಾಗಿ ಈ ರೋಗವು ಪಸರಿಸುತ್ತದೆ. ಹೀಗಾಗಿ ಜನರು ಎಚ್ಚರಿಕೆ ವಹಿಸಬೇಕು.
ಚರ್ಮಗಂಟು ರೋಗದ ಲಕ್ಷಣಗಳು
ಅತಿಯಾದ ಜ್ವರ (105-180ಈ) ಕಣ್ಣುಗಳಿಂದ ನೀರು ಸೋರುವುದು. ನಿಶಕ್ತಿ, ಕಾಲುಗಳಲ್ಲಿ ಬಾವು ಹಾಗೂ ಕಂಟುವುದು. ಜಾನುವಾರುಗಳ ಚರ್ಮದ ಮೇಲೆ 2-5 ಸೆಂ.ಮೀ.ನಷ್ಟು ಅಗಲವಿರುವ ಗುಳ್ಳೆ ಕಾಣಿಸಿಕೊಂಡು ನಂತರ ಒಡೆದು ಗಾಯವಾಗಿ ನೋವುಂಟಾಗುತ್ತದೆ. ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ನೊಣಗಳಿಂದ ಹುಳುಗಳು ಬಿದ್ದು ಹುಣ್ಣಾಗುತ್ತದೆ. ಹಾಲಿನ ಇಳುವರಿ ಕಡಿಮೆಯಾಗುವುದು. ಕೆಲಸದ ಸಾಮರ್ಥ್ಯ ಕುಂಠಿತವಾಗುತ್ತದೆ.
ಕರುಗಳು ತೀವ್ರವಾಗಿ ಬಳಲಿ ಸಾವಿಗೀಡಾಗಬಹುದು. ಮಿಶ್ರತಳಿ ಜರ್ಸಿ, ಹೆಚ್.ಎಫ್. ರಾಸುಗಳು ಹಾಗೂ ಕರುಗಳು ಈ ರೋಗದಿಂದ ಹೆಚ್ಚು ಬಳಲುತ್ತವೆ, ರೋಗ ಹರಡುತ್ತದೆ. ಸೊಳ್ಳೆ, ಉಣ್ಣೆ, ನೊಣ ಹಾಗೂ ವಿವಿಧ ಕಚ್ಚುವ ಕೀಟಗಳಿಂದ ಕಲುಷಿತಗೊಂಡ ನೀರು (Contaminated water) ಹಾಗೂ ಆಹಾರದಿಂದ ಜಾನುವಾರುಗಳ ನೇರ ಸಂಪರ್ಕದಿಂದ ರೋಗ ಹರಡುವಿಕೆ ಪ್ರಮಾಣ 10-20% ರಷ್ಟು ಹಾಗೂ ರೋಗದ ಸಾವಿನ ಪ್ರಮಾಣ 1-5% ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ.