ಬೆಂಗಳೂರು: ಬಿಎಂಎಸ್ ಶಿಕ್ಷಣ ಟ್ರಸ್ಟ್ ಅನ್ನು ಖಾಸಗಿ ವ್ಯಕ್ತಿಗಳಿಗೆ ವರ್ಗಾಯಿಸುವಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಶಾಮೀಲಾಗಿದ್ದು, ಹಣಕಾಸಿನ ಅವ್ಯವಹಾರವೂ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುರುವಾರ ವಿಧಾನಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದರು.
ಇದೀಗ ನಾನು ಹೊಡೆದ ಗುಂಡನ್ನು ವಿಫಲಗೊಳಿಸಲು ಷಡ್ಯಂತ್ರ ನಡೆಯುತ್ತಿದೆ ಎಂದಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ವಿಧಾನಸಭೆಯಲ್ಲೇ ಎಲ್ಲವನ್ನೂ ದಾಖಲೆ ಸಮೇತ ಇಟ್ಟಿದ್ದೇನೆ. ಆ ದಾಖಲೆಗಳೇ ಎಲ್ಲವನ್ನೂ ಮಾತನಾಡುತ್ತಿವೆ. ನನ್ನ ಹೊಡೆದ ಗುಂಡು ಎಲ್ಲಿ ವಿಫಲವಾಗಿದೆ? ಅದನ್ನು ವಿಫಲಗೊಳಿಸುವ ಇನ್ನೊಂದು ಹುನ್ನಾರ, ಷಡ್ಯಂತ್ರ ಈಗ ನಡೆದಿದೆ ಅಷ್ಟೇ ಎಂದು ಆರೋಪಿಸಿದ್ದಾರೆ.
ನಮ್ಮ 3 ಬೇಡಿಕೆಯಿದೆ. 1 ಬಿಎಂಎಸ್ ಟ್ರಸ್ಟ್ʼನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು. 2.ಟ್ರಸ್ಟ್ ಮತ್ತು ಆ ಟ್ರಸ್ಟ್‌ನ ಎಲ್ಲಾ ಸ್ವತ್ತುಗಳನ್ನು ರಾಜ್ಯ ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. 3.ಉನ್ನತ ಶಿಕ್ಷಣ ಸಚಿವ ಅಶ್ವಥ ನಾರಾಯಣ ಅವರು ಕೂಡಲೇ ರಾಜೀನಾಮೆ ನೀಡಬೇಕು.
ಬಿಎಂಸ್ ಟ್ರಸ್ಟ್ ಬಗ್ಗೆ ಬಿಜೆಪಿ ಸರಕಾರ ಕಾನೂನುರೀತ್ಯ ಕ್ರಮ ವಹಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ ನಾರಾಯಣ ಹೇಳಿದ್ದಾರೆ. ಕಾನೂನುರೀತ್ಯ ಕ್ರಮ ಎಂದರೆ, ಸಾವಿರಾರು ಕೋಟಿ ರೂ. ಮೌಲ್ಯದ ಸರಕಾರಿ ಸ್ವತ್ತನ್ನು ಸದ್ದಿಲ್ಲದೆ ಖಾಸಗಿ ರಿಯಲ್ ಎಸ್ಟೇಟ್ ಪಟ್ಟಭದ್ರರಿಗೆ ಧಾರೆ ಎರೆದುಕೊಡುವುದಾ ಸಚಿವರೇ ಎಂದು ಪ್ರಶ್ನಿಸಿದ್ದಾರೆ.
ಸದನದಲ್ಲಿ ನಾನಿಟ್ಟ ಪ್ರತಿ ದಾಖಲೆ ಅಕ್ರಮಕ್ಕೆ ಕನ್ನಡಿ. ನಿಮ್ಮ ಕಣ್ಣಿಗೆ ಈ ಅಕ್ರಮವೆಲ್ಲಾ ಸಕ್ರಮವಾಗಿದ್ದರೆ, ಇದಕ್ಕಿಂತ ದುರಂತ ಇನ್ನೊಂದಿಲ್ಲ. ಎಲ್ಲಾ ದಾಖಲೆಗಳನ್ನು ಮತ್ತೊಮ್ಮೆ ನೋಡಿ. ಅಷ್ಟೂ ಆಸ್ತಿಯನ್ನು ಲಪಟಾಯಿಸಲು ಟ್ರಸ್ಟ್ʼನಲ್ಲಿ ನಡೆದ ಷಡ್ಯಂತ್ರಕ್ಕೆ ಸಚಿವರಾಗಿ ನೀವು ಹೇಗೆಲ್ಲಾ ಸಹಕಾರ ನೀಡಿದ್ದೀರಿ ಎನ್ನುವುದು ಈಗ ಜಗಜ್ಜಾಹೀರು. ಉನ್ನತ ಶಿಕ್ಷಣ ಸಚಿವರೇ, 1957ರಲ್ಲಿ ರಚನೆಗೊಂಡು ನೋಂದಣಿಯಾದ ಬಿಎಂಎಸ್ ಟ್ರಸ್ಟಿನ ಮೂಲ ಡೀಡನ್ನು ಒಮ್ಮೆ ಓದಿ. ದಾನಿ ಟ್ರಸ್ಟಿ, ಆಜೀವ ಟ್ರಸ್ಟಿ ನೇಮಕದ ಬಗ್ಗೆ ಇರುವ ಷರತ್ತುಗಳನ್ನೂ ತಿಳಿಯಿರಿ. ಆದರೆ, ನೀವು ಜನರಿಗೆ ಮತ್ತು ಸರಕಾರಕ್ಕೆ ಸೇರಿದ ಇಡೀ ಟ್ರಸ್ಟಿನ ಆಸ್ತಿ ಹೊಡೆಯಲು ನಿಂತವರ ಪರ ನಾಚಿಕೆ ಇಲ್ಲದೆ ವಕಾಲತ್ತು ವಹಿಸುತ್ತಿದ್ದೀರಿ. ಬಿಎಂಎಸ್ ಎಂಜೀಯರಿಂಗ್ ಕಾಲೇಜಿನಲ್ಲಿ ಸೀಟ್ ಬ್ಲಾಕಿಂಗ್, ಪೇಮೆಂಟ್ ಸೀಟುಗಳನ್ನು 50:50 ರಂತೆ ಟ್ರಸ್ಟಿಗಳಿಬ್ಬರು ಹಂಚಿಕೊಂಡಿದ್ದು ನಿಮ್ಮ ಗಮನಕ್ಕೆ ಬರಲಿಲ್ಲವೇ? ಕಾಮೆಡ್-ಕೆ ಆಕ್ಷೇಪಣಾ ಪತ್ರ, ಸರಕಾರದ ಇಬ್ಬರು ಅಧಿಕಾರಿಗಳು ಟ್ರಸ್ಟಿನ ಅಕ್ರಮಗಳ ಬಗ್ಗೆ ಬರೆದ ಪತ್ರಗಳನ್ನು ನೀವು ಓದಲಿಲ್ಲವೇ ಸಚಿವರೇ? ಓದಲಿಲ್ಲ ಎಂದರೆ, ಅದಕ್ಕೆ ಕಾರಣವೇನು ಎಂದಿದ್ದಾರೆ.