ಬೈಲಹೊಂಗಲ: ಮಲಪ್ರಭಾ ಏತ ನೀರಾವರಿಗಾಗಿ ಭೂ ಸ್ವಾಧೀನಗೊಂಡ ಪ್ರದೇಶವನ್ನು 50 ವರ್ಷಗಳ ನಂತರ 2022 ರಲ್ಲಿ ದಾಖಲಿಸಿರುವ ತಹಶೀಲ್ದಾರ್ ಕ್ರಮವನ್ನು ರದ್ದುಪಡಿಸುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿ ಕಚೇರಿ ಎದುರು ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
ಹೊಸೂರು ಮಡಿವಾಳೇಶ್ವರ ಮಠದ ಗಂಗಾಧರ ಮಹಾಸ್ವಾಮೀಜಿ, ವೇದಮೂರ್ತಿ ಮಾಹಾಂತಯ್ಯ ಆರಾದ್ರಿಮಠ ಶಾಸ್ತ್ರಿಗಳು, ಪಟ್ಟಣದ ಬೆಳಗಾವಿ ರಸ್ತೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು.
ಚನ್ನಮ್ಮ ವೃತ್ತದಿಂದ ಇಂಚಲ ಕ್ರಾಸ್, ಬಸ್ ನಿಲ್ದಾಣ ರಾಯಣ್ಣ ವೃತ್ತದ ಮಾರ್ಗವಾಗಿ ರೈತರು ಪಾದಯಾತ್ರೆ ಮೂಲಕ ಉಪವಿಭಾಗಾಧಿಕಾರಿ ಕಚೇರಿ ತಲುಪಿ ಪ್ರತಿಭಟನೆ ನಡೆಸಿದರು. ಮಲಪ್ರಭಾ ಬಳಕೆದಾರರ ಸಂಘ ಹಾಗೂ ವಿವಿಧ ರೈತ ಪರ ಸಂಘಟನೆಗಳಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಮಲಪ್ರಭಾ ಬಳಕೆದಾರರ ಮುಖಂಡರಾದ ಬಿ.ಎಮ್. ಚಿಕ್ಕನಗೌಡರ ಮಾತನಾಡಿ, ತಹಶೀಲ್ದಾರ ಕ್ರಮವನ್ನು ರದ್ದುಪಡಿಸುವವರೆಗೆ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ರೈತ ಮುಖಂಡರಾದ ಸಿದ್ದಗೌಡ ಮೋದಗಿ, ರಾಘವೇಂದ್ರ ನಾಯಕ್, ಪ್ರಕಾಶ ನಾಯಕ, ರವಿ ಸಿದ್ದಮ್ಮನವರ, ಮಲ್ಲಿಕಾರ್ಜುನ ಹುಂಬಿ, ಮಹಾಂತೇಶ ಕಮತ, ಸುರೇಶ ಸಂಪಗಾವಿ, ಸೇರಿದಂತೆ ರೈತ ಮುಖಂಡರು ಹಾಗೂ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.