ಬೆಳಗಾವಿ:ಎರಡು ತಿಂಗಳಲ್ಲಿ ಮೂರು ಬಾರಿ ಪ್ರವಾಹ. ಇದು ಸಾಲದು ಎನ್ನುವಂತೆ ಸತತ ಮಳೆ. ಈ ಎರಡೂ ಅವಾಂತರಗಳಿಂದ ನಮ್ಮನ್ನು ಪಾರು ಮಾಡುವುದು ಸರಕಾರಕ್ಕೆ ಸಾಧ್ಯವೇ ಇಲ್ಲ. ಕೊನೆಗೆ ದೇವರೇ ನಮ್ಮನ್ನು ಕಾಪಾಡಬೇಕು. ಸರಕಾರ ನೀಡುವ ಅಲ್ಪಸ್ವಲ್ಪ ಪರಿಹಾರ ಸಮಾಧಾನಕ್ಕೂ ಸಾಲಲ್ಲ.
ಇದು ಗಡಿ ಜಿಲ್ಲೆ ಬೆಳಗಾವಿಯ ರೈತ ಸಮುದಾಯದ ಈ ವರ್ಷದ ಸ್ಥಿತಿ.
ಪ್ರವಾಹಕ್ಕೆ ಒಂದು ರೀತಿಯಲ್ಲಿ ಒಗ್ಗಿಕೊಂಡಿರುವ ನದಿ ಪಾತ್ರದ ಜನರಿಗೆ ಈ ಬಾರಿ ಪ್ರವಾಹದ ಜತೆಗೆ ನಿರಂತರವಾಗಿ ಸುರಿದ ಮಳೆ ಕೃಷಿ ಚಟುವಟಿಕೆಗಳ ಮೇಲೆ ಬೇಸರ ಬರುವಂತೆ ಮಾಡಿದೆ. ಕೃಷಿಗೆ ಹಾಕಿದ ರೊಕ್ಕ ಯಥೇತ್ಛವಾಗಿ ಕೈಗೆ ಬರುತ್ತದೆ ಎಂಬ ವಿಶ್ವಾಸ ಹೊರಟು ಹೋಗಿದೆ.
ಕಳೆದ ಮೂರು ತಿಂಗಳಿಂದ ಕಾಡುತ್ತಿರುವ ಮಳೆ ಮತ್ತು ನದಿಗಳ ಪ್ರವಾಹ ಕೃಷಿ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ. ಯಾವ ಬೆಳೆಯೂ ಸಮೃದ್ಧವಾಗಿ ಬರುವ ನಂಬಿಕೆ ಉಳಿದಿಲ್ಲ. ನಿರಂತರ ಮಳೆ ಹೊಲಗಳಿಗೆ ಹೋಗದಂತೆ ಮಾಡಿದೆ. ಮೊಳಕಾಲುದ್ದ ನಿಂತಿರುವ ನೀರು ಬೆಳೆಗಳು ಮೇಲೇಳದಂತೆ ಮಾಡಿದ್ದರೆ ಹಾನಿಯ ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ಸಹ ಹೊಲಗಳಿಗೆ ಕಾಲಿಡದಂತೆ ಮಾಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಜಿಲ್ಲೆಯ ಪ್ರವಾಹ ಸ್ಥಿತಿ ಮತ್ತು ಕೃಷಿ ಬೆಳೆ ಹಾನಿಯ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ವಾಸ್ತವ ಸ್ಥಿತಿಯ ಅವಲೋಕನ ನಡೆಸಿದ್ದಾರೆ. ತ್ವರಿತಗತಿಯಲ್ಲಿ ಬೆಳೆಹಾನಿ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ವಿತರಣೆಗೆ ಕ್ರಮ ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅದರಂತೆ ಕಂದಾಯ, ಕೃಷಿ ಮತ್ತುತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಬೆಳೆಹಾನಿ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದಾರೆ.