ಹುಬ್ಬಳ್ಳಿ: ಪೊಲೀಸ್ ಇಲಾಖೆ (Police Department) ಅಂದ್ರೆ ಸದಾ ಒತ್ತಡದ ಕೆಲಸ. ಒಂದಷ್ಟು ನಿದ್ದೆ ಮಾಡೋಕೆ ಟೈಮ್ ಸಿಕ್ಕರೂ ಸಾಕು ಅನ್ನೋ ಅಧಿಕಾರಿಗಳಿದ್ದಾರೆ. ಹೀಗಿರುವಾಗ ಇಲ್ಲೊಬ್ಬ ಅಧಿಕಾರಿ ಡ್ಯೂಟಿಗೂ ಸೈ, ಬಯಲಾಟಕ್ಕೂ (Bayalata) ಜೈ ಅಂತಿದಾರೆ. ಅದರಲ್ಲಿಯೂ ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆ (Gokul Road Police Station) ಅಂದ್ರೆ ಅದರ ಕಥೆ ಹೇಳುವಂತೆಯೇ ಇಲ್ಲ. ಸದಾ ಕರ್ತವ್ಯ ನಿರತವಾಗಿರೋ ಅನಿವಾರ್ಯತೆ ಇರೋ ಈ ಠಾಣೆಯಲ್ಲಿ ಕೆಲಸ ಮಾಡುತ್ತಲೇ ಪೊಲೀಸ್ ಇನ್ಸಪೆಕ್ಟರ್ (Police Inspector) ಒಬ್ಬರು ಬಯಲಾಟದಲ್ಲಿ ಬಣ್ಣ ಹಚ್ಚಿ ಗೆಜ್ಜೆ ಕಟ್ಟಿಕೊಂಡು ಹೆಜ್ಜೆ ಹಾಕಿ ಎಲ್ಲರನ್ನೂ ಹುಬ್ಬೇರುವಂತೆ ಮಾಡಿದ್ದಾರೆ. ಹುಬ್ಬಳ್ಳಿ ಗಲಭೆ ಇರಲಿ, ಸರಣಿ ಕಳ್ಳತನವಿರಲಿ, ಇನ್ಯಾವುದೇ ಪ್ರಕಣವಿರಲಿ, ಆರೋಪಿಗಳ ಹೆಡೆಮುರಿ ಕಟ್ಟಿ ಹಿರಿಯ ಪೊಲೀಸ್ ಅಧಿಕಾರಿಗಳಿಂದಲೂ ಭೇಷ್ ಅನಿಸಿಕೊಂಡವರು ಪೊಲೀಸ್ ಇನ್ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ (Police Inspector JM Kalimirchi). ಪೊಲೀಸ್ ಇಲಾಖೆಯಲ್ಲಿದ್ದರೂ ಸಾಂಸ್ಕೃತಿಕ ತುಡಿತ ಮಾತ್ರ ಇವರಿಗೆ ಇರೋದ್ರಿಂದ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳೋದನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ.
ಬಹುಮುಖ ಪ್ರತಿಭೆಯನ್ನೊಳಗೊಂಡಿರುವ ಜೆ.ಎಂ.ಕಾಲಿಮಿರ್ಚಿ, ಖಾಕಿ ತೊಟ್ಟರೆ ಖಡಕ್ ಅಧಿಕಾರಿ, ಬಣ್ಣ ಹಚ್ಚಿದ್ರೆ ಅದ್ಭುತ ಕಲಾವಿದ ಎಂದೆನಿಸಿಕೊಂಡಿದ್ದಾರೆ. ಅದಕ್ಕೆ ತಾಜಾ ನಿದರ್ಶನ ಹುಬ್ಬಳ್ಳಿಯಲ್ಲಿ ನಡೆದ ಬಯಲಾಟ ಕಾರ್ಯಕ್ರಮ. ಜನಪದ ಕಲಾ ಬಳಗ ಟ್ರಸ್ಟ್ನಿಂದ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಕರ್ಣ ಪರ್ವ ದೊಡ್ಡಾಟ ನಡೆಯಿತು.
ಕರ್ಣಪರ್ವ ದೊಡ್ಡಾಟದಲ್ಲಿ ಕಲೆ ಪ್ರದರ್ಶನ
ಉತ್ತರ ಕರ್ನಾಟಕ ಪ್ರಸಿದ್ಧ ಕಲೆ ದೊಡ್ಡಾಟದಲ್ಲಿ ಹೆಜ್ಜೆ ಹಾಕುವ ಮೂಲಕ ಇನ್ಸ್ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ಗಮನ ಸೆಳೆದರು.
ಹುಬ್ಬಳ್ಳಿಯ ಗೋಕುಲ ರೋಡ್ ಠಾಣೆ ಇನ್ಸ್ಪೆಕ್ಟರ್ ಜೆ.ಎಮ್.ಕಾಲಿಮಿರ್ಚಿ ದೊಡ್ಡಾಟಕ್ಕೆ ಬಣ್ಣ ಹಚ್ಚಿದ್ದರು. ಡಾ. ಚಂದ್ರಶೇಖರ್ ಕಂಬಾರ ಅವರ ದತ್ತಿ ಕಾರ್ಯಕ್ರಮದಲ್ಲಿ “ಕರ್ಣಪರ್ವ” ಎಂಬ ದೊಡ್ಡಾಟದಲ್ಲಿ ಇನ್ಸ್ಪೆಕ್ಟರ್ ತಮ್ಮ ಕಲೆ ಪ್ರದರ್ಶಿಸಿದ್ದಾರೆ.