ಬೆಂಗಳೂರು :ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಡೆದಿರುವ ಶಿಕ್ಷಕರ ನೇಮಕಾತಿ ಹಗರಣದ ಸಿಐಡಿ ತನಿಖೆಯಲ್ಲಿ ಮತ್ತಷ್ಟು ರೋಚಕ ಸಂಗತಿಗಳು ಬಯಲಾಗಿವೆ. ಮುಖ್ಯ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದು ಕರ್ತವ್ಯಕ್ಕೆ ಹಾಜರಾಗದ ಅಭ್ಯರ್ಥಿಗಳ ಬದಲಿಗೆ ಅದೇ ಹೆಸರಿನ, ಪರೀಕ್ಷೆಯನ್ನೇ ಬರೆಯದ, ಅರ್ಹತೆಯೂ ಇಲ್ಲದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪ್ರತಿ ಕೊಟ್ಟಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
2012-13 ಹಾಗೂ 2014-15ನೇ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆಗಳ ಗ್ರೇಡ್-2 ಸಹಶಿಕ್ಷಕರು ಹಾಗೂ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈಗಾಗಲೇ 12 ಜನರನ್ನು ಸಿಐಡಿ ಬಂಧಿಸಿದೆ. ಆರೋಪಿಗಳ ಕಸ್ಟಡಿ ಅವಧಿ ಬುಧವಾರಕ್ಕೆ ಅಂತ್ಯಗೊಳ್ಳಲಿದೆ. ಹಗರಣದಲ್ಲಿ ಕೆಲ ರಾಜಕಾರಣಿಗಳೂ ಭಾಗಿಯಾಗಿರುವ ಬಗ್ಗೆ ಅನುಮಾನ ಹಿನ್ನೆಲೆ ತನಿಖೆ ಮುಂದುವರಿಸಲು ಸಿಐಡಿ ಅಧಿಕಾರಿಗಳು ಬಂಧಿತರನ್ನು ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಆಂತರಿಕ ತನಿಖೆ ಹಾಗೂ ಸಿಐಡಿ ತನಿಖೆ ಸಂದರ್ಭದಲ್ಲಿ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದಕ್ಕೆ ಸಾಕ್ಷ್ಯಾಧಾರ ಲಭ್ಯವಾಗಿದೆ.
ಆಯ್ಕೆಯಾದವರು ಸಲ್ಲಿಸಿರುವ ದಾಖಲೆ ಹಾಗೂ ಹುದ್ದೆಗೆ ನೇಮಕಗೊಂಡವರ ದಾಖಲೆಗಳು ಬೇರೆ ಬೇರೆಯಾಗಿವೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿದ ಸಂದರ್ಭದಲ್ಲಿ ಕೇಂದ್ರೀಕೃತ ದಾಖಲಾತಿ ಘಟಕದಲ್ಲಿರುವ ಅಭ್ಯರ್ಥಿಗಳ ದಾಖಲೆಗಳಿಗೂ ಜಿಲ್ಲಾ ಉಪ ನಿರ್ದೇಶಕರ ಕಚೇರಿಯಲ್ಲಿನ ದಾಖಲೆಗಳಿಗೂ ವ್ಯತ್ಯಾಸವಿರುವುದು ಪತ್ತೆಯಾಗಿದೆ.
ನಿರ್ದಿಷ್ಟ ಅಭ್ಯರ್ಥಿ ಪಡೆದಿರುವ ಅಂಕಗಳು ಕೂಡ ಜಿಲ್ಲಾ ದಾಖಲೆಗಳೊಂದಿಗೆ ಹೊಂದಾಣಿಕೆಯಾಗಿಲ್ಲ. ತುಮಕೂರು ಜಿಲ್ಲಾ ಉಪ ನಿರ್ದೇಶಕರ ಕಚೇರಿಯಲ್ಲಿನ ದಾಖಲೆಗಳನ್ನು ಪರಿಶೀಲಿಸಿದಾಗ ಆಯಾ ವರ್ಗಕ್ಕೆ ನಿಗದಿಯಾದ ಮೆರಿಟ್ ಕಟ್ ಆಫ್ಗಿಂತಲೂ ಕಡಿಮೆ ಮೆರಿಟ್ ಇರುವವರಿಗೂ ನೇಮಕಾತಿ ಆದೇಶ ನೀಡಿರುವುದು ಕಂಡು ಬಂದಿದೆ.
ಒಂದೇ ದಿನ 2 ಎಫ್ಐಆರ್: 2012-13ನೇ ಸಾಲಿನ ಸರ್ಕಾರಿ ಪ್ರೌಢಶಾಲೆಗಳ ಗ್ರೇಡ್-2 ಸಹಶಿಕ್ಷಕರ ನೇಮಕಾತಿಯಲ್ಲಿ ಮಹೇಶ ಶ್ರೀಮಂತ ಸೂಸಲಾಡಿ ಎಂಬುವರು ಅಕ್ರಮವಾಗಿ ನೇಮಕಾತಿ ಹೊಂದಿರುವುದಾಗಿ ಶಿಕ್ಷಣ ಇಲಾಖೆ ನೀಡಿದ ದೂರಿನ ಅನ್ವಯ 2022ರ ಆ.12ರಂದು ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ನಂತರ 2014-15ನೇ ಸಾಲಿನ ಸರ್ಕಾರಿ ಪ್ರೌಢಶಾಲೆಗಳ ಗ್ರೇಡ್-2 ಸಹಶಿಕ್ಷಕರು ಹಾಗೂ ಗ್ರೇಡ್-1 ದೈಹಿಕ ಶಿಕ್ಷಕರ ನೇಮಕಾತಿಯಲ್ಲಿ ಅರ್ಹರಲ್ಲದ 11 ಅಭ್ಯರ್ಥಿಗಳನ್ನು ನೇಮಕಾತಿ ಮಾಡಿರುವ ಬಗ್ಗೆ ತನಿಖೆ ನಡೆಸುವಂತೆ ಶಿಕ್ಷಣ ಇಲಾಖೆ ನೀಡಿದ ದೂರಿನ ಮೇರೆಗೆ ಅದೇ ದಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲೇ ಇನ್ನೊಂದು ಎಫ್ಐಆರ್ ದಾಖಲಾಗಿತ್ತು. ಆರೋಪಿಗಳ ಮಾಹಿತಿ ಸಂಗ್ರಹಿಸಿದ್ದ ಸಿಐಡಿ ತಂಡಗಳು ಸೆ.6ರಂದು ಏಕಕಾಲದಲ್ಲಿ ದಾಳಿ ನಡೆಸಿ 11 ಅಭ್ಯರ್ಥಿಗಳನ್ನು ಬಂಧಿಸಿದ್ದವು. ಒಟ್ಟಾರೆ ಪ್ರಕರಣದಲ್ಲಿ ಅಧಿಕಾರಿ ಸೇರಿ ಈವರೆಗೆ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗೊತ್ತಾಗಿದ್ದು ಹೇಗೆ?: 2014-15ನೇ ಸಾಲಿನಲ್ಲಿ ನಡೆಸಲಾಗಿದ್ದ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಸೇರಿ ಕೆಲ ಸಂಘಟನೆಗಳು ದೂರು ನೀಡಿ ತನಿಖೆಗೆ ಆಗ್ರಹಿಸಿದ್ದವು. ಶಿಕ್ಷಣ ಇಲಾಖೆಯ ಆಂತರಿಕ ಪರಿಶೀಲನೆಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗಿತ್ತು. ಈ ವಿಚಾರ ಗಮನಕ್ಕೆ ಬಂದ ನಂತರ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.
ಹೇಗೆಲ್ಲ ಅಕ್ರಮ ನಡೆದಿದೆ?
- ಆಯ್ಕೆ ಪಟ್ಟಿಯಲ್ಲಿದ್ದು ಕರ್ತವ್ಯಕ್ಕೆ ಹಾಜರಾಗದ ಅಭ್ಯರ್ಥಿಗಳ ಬದಲಿಗೆ ಅನರ್ಹರ ನೇಮಕ
- ಆಯ್ಕೆ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ಹೆಸರಿನಲ್ಲೇ ನಕಲಿ ದಾಖಲಾತಿ ಸೃಷ್ಟಿಸಿ ಸಲ್ಲಿಕೆ
- ಕೆಲ ಅಭ್ಯರ್ಥಿಗಳು ಕೇವಲ ಅರ್ಜಿ ಸಲ್ಲಿಸಿದ್ದು, ಪರೀಕ್ಷೆಗೆ ಹಾಜರಾಗದಿದ್ದರೂ ಕೆಲಸ
- ಹೆಚ್ಚುವರಿ ಪಟ್ಟಿಯಿಂದ ಆಯ್ಕೆ ಮಾಡುವಾಗಲೂ ಆ ಪಟ್ಟಿಯಲ್ಲಿಲ್ಲದವರಿಗೂ ನೇಮಕಾತಿ ಆದೇಶ
- ಅಕ್ರಮ ಎಸಗಲು ದಾಖಲೆಗಳ ಪೋರ್ಜರಿ, ನೈಜ ಸಂಗತಿಗಳನ್ನು ಮರೆಮಾಚಿರುವುದು
ಎಫ್ಡಿಎ ಅಮಾನತು: ಸಹ ಶಿಕ್ಷಕರ ಅಕ್ರಮ ನೇಮಕಾತಿಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೆಂಗಳೂರು ವಿಭಾಗ ಸಹ ನಿರ್ದೇಶಕರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಕೆ.ಎಸ್. ಪ್ರಸಾದ್ನನ್ನು ಶಿಕ್ಷಣ ಇಲಾಖೆ ಸೇವೆಯಿಂದ ಅಮಾನತು ಮಾಡಿದೆ. ಈತನನ್ನು ಸಿಐಡಿ ಪೊಲೀಸರು ಸೆ.6ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಬಂಧಿತ ಶಿಕ್ಷಕರು
- ಶಮೀನಾಜ್ ಭಾನು(34) ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕಿ, ಬೋರನ ಕಣಿವೆ ಗ್ರಾಮ, ಚಿಕ್ಕನಾಯಕನಹಳ್ಳಿ
- ರಾಜೇಶ್ವರಿ ಜಗ್ಲಿ(35) ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕಿ, ಕೊಡವತ್ತಿ ಗ್ರಾಮ, ಕುಣಿಗಲ್
- ಕಮಲಾ(35) ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕಿ, ಆಲ್ಬೂರು ಗ್ರಾಮ, ತಿಪಟೂರು
- ನಾಗರತ್ನ(42) ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕಿ, ನಾಗಸಂದ್ರ ಗ್ರಾಮ, ಕುಣಿಗಲ್
- ಎಚ್. ದಿನೇಶ್(38) ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ, ಹುಲಿಕಲ್ ಗ್ರಾಮ, ತುರುವೇಕೆರೆ
- ನವೀನ್ ಹನುಮನಗೌಡ(35) ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ, ಕಮ್ಲಾಪುರ ಗ್ರಾಮ, ಚಿಕ್ಕನಾಯಕನಹಳ್ಳಿ
- ಬಿ.ಎನ್. ನವೀನ್ ಕುಮಾರ್(38) ಕರ್ನಾಟಕ ಪಬ್ಲಿಕ್ ಶಾಲೆ ಸಹಶಿಕ್ಷಕ, ಅಮೃತೂರು ಗ್ರಾಮ, ಕುಣಿಗಲ್ ತಾಲೂಕು
- ಎಸ್. ದೇವೇಂದ್ರ ನಾಯ್ಕ ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಸಹಶಿಕ್ಷಕ, ಕೆ.ಮತ್ತಿಘಟ್ಟ ಗ್ರಾಮ ಗುಬ್ಬಿ
- ಆರ್. ಹರೀಶ್(37) ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ, ಹೊಳಗೇರಿಪುರ ಗ್ರಾಮ, ಕುಣಿಗಲ್
- ಬಿ.ಎಂ.ಪ್ರಸನ್ನ(42) ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ, ಹುಲಿಕೇರಿ ಗ್ರಾಮ, ತುರುವೇಕೆರೆ
- ಮಹೇಶ ಶ್ರೀಮಂತ ಸೂಸಲಾಡಿ(38) ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ, ಹತ್ತಲ್ಳಿ ಗ್ರಾಮ, ಚಡಚಣ ತಾಲೂಕು
- ಸಿದ್ರಾಮಪ್ಪ ಆರ್.ಬಿರಾದಾರ(36) ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ, ಕಪನಿಂಬರಗಿ ಗ್ರಾಮ, ಚಡಚಣ ತಾಲೂಕು