ಚಿಕ್ಕೋಡಿ: ಗಂಡನ ಅನೈತಿಕ ಸಂಬಂಧದಿಂದ ಬೇಸತ್ತು ತವರು ಸೇರಿದ ಪತ್ನಿಯ ಮೇಲೆ ಆತ ಗುಂಡು ಹಾರಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.
ತವರು ಮನೆಯಿಂದ ವಾಪಸ್ ಬರುವಂತೆ ಪತ್ನಿಯ ಮೇಲೆ ಹಲ್ಲೆ ಮಾಡಿ ಅವರ ಮೇಲೆ ಗುಂಡು ಹಾರಿಸಿರುವ ಆರೋಪವನ್ನು ಶಿವಾನಂದ ಕಾಗಲೆ (4೦) ಎದುರಿಸುತ್ತಿದ್ದಾನೆ.
ಪತ್ನಿ ಪ್ರೀತಿ ಗಂಡನ ಅನೈತಿಕ ಸಂಬಂಧದಿಂದ ಬೇಸತ್ತು ತವರು ಮನೆ ಸೇರಿದ್ದರು.
ಅವರ ಮನೆಗೆ ಹೋಗಿದ್ದ ಶಿವಾನಂದ ಕಾಗಲೆ, ವಾಪಸಾಗುವಂತೆ ಪತ್ನಿಯ ಮೇಲೆ ಗುಂಡು ಹಾರಿಸಿದ್ದಾನೆ. ಒಂದು ವೇಳೆ ವಾಪಸ್ ಆಗದಿದ್ದರೆ ಇದೇ ಗುಂಡಿನಿಂದ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ ಗುಂಡಿನಿಂದ ತಪ್ಪಿಸಿಕೊಂಡು ಪತ್ನಿ ಪ್ರೀತಿ ಪ್ರಾಣ ಉಳಿಸಿಕೊಂಡಿದ್ದಾರೆ.
ಶಿವಾನಂದ್ ಮತ್ತು ಪ್ರೀತಿ ಅವರ ಮದುವೆ ಕಳೆದ ನಾಲ್ಕು ವರ್ಷಗಳ ಹಿಂದೆ ನಡೆದಿತ್ತು. ಆದರೆ ಶಿವಾನಂದ ಬೇರೊಬ್ಬಳ ಜತೆ ಅನೈತಿಕ ಸಂಬಂಧ ಹೊಂದಿದ್ದ. ಇದರಿಂದ ದಂಪತಿ ನಡುವೆ ಜಗಳವಾಗುತ್ತಿತ್ತು. ಪತಿಯ ಕೃತ್ಯದಿಂದ ಬೇಸತ್ತ ಪ್ರೀತಿ ಅವರು. ಬೆಳಗಾವಿ ಜಿಲ್ಲೆಯ ಅಥಣಿಗೆ ಬಂದು ತಾಯಿಯೊಂದಿಗೆ ವಾಸವಿದ್ದರು.
ಅವರ ಮನೆಗೆ ಹೋದ ಪತಿ, ನೀನು ಮನೆಗೆ ಬರಲೇಬೇಕು ಅಂತ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾನೆ. ಎರಡು ಗುಂಡು ಹಾರಿಸಿ ನಾಲ್ಕು ಗುಂಡು ಬಾಕಿ ಇಟ್ಟುಕೊಂಡಿದ್ದ ಶಿವಾನಂದ, ಮನೆಗೆ ಬರಲಿಲ್ಲವೆಂದರೆ ಎರಡು ಗುಂಡು ನಿನಗೆ ಹಾರಿಸಿ ಎರಡು ಗುಂಡು ನಾನು ಹಾರಿಸಿಕೊಳ್ತಿನಿ ಅಂತ ಧಮ್ಕಿ ಹಾಕಿದ್ದಾನೆ. ಇಬ್ಬರೂ ಸೇರಿ ಸತ್ತು ಹೋಗೊಣ ಎಂದು ಹೇಳಿದ್ದಾನೆ.