ವಾಡಿ (ಚಿತ್ತಾಪುರ): ಪೊಲೀಸ್ ಹುದ್ದೆಗೇರುವ ಕನಸು ಕಟ್ಟಿಕೊಂಡು ಧಾರವಾಡ ನಗರದ ಕೋಚಿಂಗ್ ಸೆಂಟರ್ ಸೇರಿಕೊಂಡಿದ್ದ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ಯುವಕನೋರ್ವ ನಿಗೂಢ ನಾಪತ್ತೆಯಾಗಿದ್ದು, ಕಳೆದ 40 ದಿನಗಳಿಂದ ಪೊಲೀಸರು ಹುಡುಕಾಟ ನಡೆಸಿದ್ದರೂ ಆತನ ಸುಳಿವು ಪತ್ತೆಯಾಗಿಲ್ಲ.
ಕಾಗಿಣಾ ನದಿ ತೀರದ ಇಂಗಳಗಿ ಗ್ರಾಮದ ನಿವಾಸಿ ಸಾಬಣ್ಣ ಭಜಂತ್ರಿ (25) ಪೊಲೀಸ್ ಹುದ್ದೆಯ ಪರೀಕ್ಷೆ ಬರೆಯಲು ನಾಲ್ಕು ತಿಂಗಳ ಹಿಂದೆ ಧಾರವಾಡ ನಗರದ ಗುರುದೇವ ಕೋಚಿಂಗ್ ಕೇಂದ್ರ ಸೇರಿಕೊಂಡಿದ್ದ ಎನ್ನಲಾಗಿದ್ದು, ಸಹಪಾಠಿ ಗೆಳೆಯರೊಂದಿಗೆ ಕೂಡಿಕೊಂಡು ಬಾಡಿಗೆ ಕೋಣೆ ಪಡೆದಿದ್ದರು. ಜುಲೈ 29 ರಂದು ರಾತ್ರಿ 10:30 ರ ಸುಮಾರಿಗೆ ಧಾರವಾಡ ನಗರದಲ್ಲಿ ಗೆಳೆಯರೊಂದಿಗೆ ಸುತ್ತಿದ್ದಾಗ ಮೂತ್ರ ವಿಸರ್ಜನೆಗೆಂದು ಹೋದ ಸಾಬಣ್ಣ ನಿಗೂಢವಾಗಿ ಕಣ್ಮರೆಯಾಗಿದ್ದಾನೆ.
ಮಗ ಕಾಣೆಯಾಗಿರುವ ಕುರಿತು ಧಾರವಾಡ ನಗರ ಪೊಲೀಸರಿಗೆ ವಿದ್ಯಾರ್ಥಿ ಸಾಬಣ್ಣನ ತಂದೆ ಮರಿಯಪ್ಪ ಭಜಂತ್ರಿ ಅವರು ನೀಡಿದ ದೂರಿನ ಮೇರೆಗೆ ಧಾರವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ಯುವಕನ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.