ಕಾರವಾರ: ಜಿಲ್ಲೆಯ ಯಲ್ಲಾಪುರ ತಾಲೂಕಿನ ಯಲ್ಲಾಪುರದಲ್ಲಿನ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿನ ಸಹಾಯಕ ಮ್ಯಾನೇಜರ್ ಅಕ್ರಮವಾಗಿ 2.70 ಕೋಟಿ ರೂ.ಗಳನ್ನು ಲಪಟಾಯಿಸಿ ತನ್ನ ಪತ್ನಿ ಖಾತೆಗೆ ಜಮಾ ಮಾಡಿದ್ದ ಹಗರಣ ಸಂಬಂಧ ಪ್ರಕರಣ ದಾಖಲಾಗಿದೆ.
ಸುಮನ್ ಪನ್ನೇಕರ್ ಹೇಳಿದ್ದಾರೆ.
ನಗರದ ಎಸ್‌ಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ಯಲ್ಲಾಪುರದ ಬ್ಯಾಂಕ್ ಆಫ್ ಬರೋಡಾದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕುಮಾರ ಬೋನಲ್ ಬ್ಯಾಂಕ್ ನ ಕ್ಲರ್ಕ್ ಮತ್ತು ಇತರೆ ಸಿಬಂದಿ ಟೀ ಕುಡಿಯಲು ಅಥವಾ ಊಟಕ್ಕೆ ಹೋದಾಗ ಅವರ ಐಡಿ ಯಿಂದ ಲಾಗಿನ್ ಆಗಿ ಹಂತ ಹಂತವಾಗಿ ಕಳೆದ 4-5 ತಿಂಗಳಿಂದ ತನ್ನ ಕುಟುಂಬಸ್ಥರ ಖಾತೆಗೆ ಹಣವನ್ನು ವರ್ಗಾವಣೆ ಮಾಡಿಕೊಳ್ಳುತ್ತಿದ್ದ. 5 ತಿಂಗಳಿಂದ ಪ್ರಕರಣ ಬೆಳಕಿಗೆ ಬರುವ ತನಕ ಇಲ್ಲಿಯವರೆಗೆ ಬ್ಯಾಂಕ್ ನಿಂದ 2.70 ಕೋಟಿ ರೂ. ಹಣವನ್ನು ವರ್ಗಾಯಿಸಿಕೊಂಡಿರುವುದು ತಿಳಿದು ಬಂದಿದೆ.
ಈ ವಿಷಯವು ಬ್ಯಾಂಕ್ ಆಫ್ ಬರೋಡಾ ಸಿಬಂದಿಗಳಿಗೆ ಇತ್ತೀಚೆಗೆ ಗಮನಕ್ಕೆ ಬಂದಿದ್ದರಿಂದ ಕುಮಾರ್ ಬೋನಾಲ್ ರ ವಂಚನೆಯ ಬಗ್ಗೆ ದೂರು ನೀಡಿದ್ದಾರೆ. ಅವರ ಮಾಹಿತಿ ಹಾಗೂ ದಾಖಲೆಗಳನ್ನು ಆಧರಿಸಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅವರು ತಮ್ಮ ಪತ್ನಿಯ ಖಾತೆಗೆ ಜಮಾ ಮಾಡಿರುವುದರಿಂದ ಅವರನ್ನೂ ಈ ಪ್ರಕರಣದ ಆರೋಪಿಯನ್ನಾಗಿ ಮಾಡಲಾಗಿದೆ.
ಇನ್ನು ಅವರ ಖಾತೆಯಿಂದ ಹಣವನ್ನು ಮರು ಭರ್ತಿ ಮಾಡಿಕೊಳ್ಳಲು ಈಗ ಅವರ ಖಾತೆಯಲ್ಲಿ ಯಾವುದೇ ಹಣವಿಲ್ಲ ಎಂಬುದು ತಿಳಿದು ಬಂದಿದೆ. ಇದರ ಜೊತೆಗೆ ಈ ಬ್ಯಾಂಕ್ ಸಹಾಯಕ ಮ್ಯಾನೇಜರ್ ಬೋನಾಲ್ ಕಳೆದೊಂದು ವಾರದ ಹಿಂದೆಯೇ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಆ ಸಂದರ್ಭದಲ್ಲಿ ಬ್ಯಾಂಕ್ ವಿಷಯ ಯಾರ ಗಮನಕ್ಕೂ ಬಂದಿರಲಿಲ್ಲ. ಅವರ ಪತ್ತೆಗೆ ತನಿಖೆ ಆರಂಭಿಸಲಾಗಿದೆ. ಆರೋಪಿ ಪತ್ತೆಯಾದ ಬಳಿಕ ಹಣವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.