ಬೆಂಗಳೂರು, ಸೆ.11: ‘ದಮ್ ಇದ್ದರೆ ಬಿಜೆಪಿ ಯಾತ್ರೆ ಹಿಮ್ಮೆಟ್ಟಿಸಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ. ನಾವು ಯಾಕೆ ಹಿಮ್ಮೆಟ್ಟಿಸಲು ಹೋಗ್ಬೇಕು? ಸಮಾವೇಶದಲ್ಲಿಯ ಖಾಲಿ ಕುರ್ಚಿಗಳನ್ನು ನೋಡಿದರೆ ನಿಮ್ಮ ‘ಜಾತ್ರೆ’ಯನ್ನು ನಮ್ಮ ಜನರೇ ಹಿಮ್ಮೆಟ್ಟಿಸಿದ್ದಾರೆ ಎಂದು ನಿಮಗೆ ಅನಿಸಲ್ವಾ?
ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬೊಮ್ಮಾಯಿವರನ್ನು ಛೇಡಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಧಮ್ ಎಂದರೆ ಧಮ್ ಬಿರಿಯಾನಿ ಎಂದು ಬೊಮ್ಮಾಯಿ ತಿಳಿದುಕೊಂಡ ಹಾಗಿದೆ. ನಮಗೆ ಸವಾಲು ಹಾಕುವ ಧಮ್ ನಿಮಗಿಲ್ಲ ಎನ್ನುವುದು ಸ್ವತಃ ನಿಮಗೂ ಗೊತ್ತು. ನಿಮಗೆ ಧಮ್ ಇದ್ದರೆ ಮೊದಲು ನಿಮ್ಮ ಸಂಪುಟದಲ್ಲಿರುವ ಖಾಲಿ ಸ್ಥಾನಗಳನ್ನು ತುಂಬಿ ಬಿಡಿ. ಕನಿಷ್ಠ ಬಸವನಗೌಡ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಿ. ಆ ಮೇಲೆ ನಿಮ್ಮ ಧಮ್ ನೋಡೋಣ ಎಂದು ಪ್ರತಿ ಸವಾಲು ಹಾಕಿದ್ದಾರೆ.
‘ಜನಮರ್ದನ’ ಅಲ್ಲಲ್ಲ, ‘ಜನಸ್ಪಂದನ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವೀರಾವೇಶದ ಭಾಷಣ ಕೇಳಿ ಖುಷಿಯಾಯಿತು. ಸಂಘ ಪರಿವಾರ ಇಂತಹ ಜೋರು ಮಾತುಗಳನ್ನು ಸಹಿಸವುದಿಲ್ಲ, ಇದೇ ರೀತಿ ಮಾತನಾಡಿಯೇ ಪಾಪ ಬಿ.ಎಸ್.ಯಡಿಯೂರಪ್ಪ ಜೈಲು ಸೇರಿದ್ದು ಎನ್ನುವುದು ನೆನಪಿರಲಿ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.
ನನ್ನ ಅಧಿಕಾರವಧಿಯ ಹಗರಣಗಳನ್ನು ಬಯಲಿಗೆಳೆಯುತ್ತೇವೆ ಎಂದು ಕಳೆದ ಕೆಲವು ದಿನಗಳಿಂದ ಬಿಜೆಪಿ ನಾಯಕರು ಧಮ್ಕಿ ಹಾಕುತ್ತಲೇ ಇದ್ದಾರೆ. ಧಮ್ ಇದ್ದರೆ ಮೊದಲು ಆ ಕೆಲಸ ಮಾಡಿ. ನಾನು ಅದನ್ನು ಎದುರಿಸಲು ಸದಾ ಸಿದ್ಧ. ಈ ಬ್ಲಾಕ್ ಮೇಲ್ ತಂತ್ರಗಳನ್ನೆಲ್ಲ ನಿಮ್ಮವರ ಮೇಲೆ ಬಳಸಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ಚರ್ಚೆಗೆ ನೀವು ಸಿದ್ಧರಿದ್ದೀರಾ ಎಂದು ಬೊಮ್ಮಾಯಿವರನ್ನು ಪ್ರಶ್ನಿಸಿರುವ ಸಿದ್ದರಾಮಯ್ಯ, ನಮ್ಮ ಪಕ್ಷ ಸಿದ್ಧ ಇದೆ. ನೀವು ಸಿದ್ಧವಿದ್ದರೆ ಸಾರ್ವಜನಿಕ ಚರ್ಚೆಗೆ ಸ್ಥಳ-ಸಮಯ ನೀವೇ ನಿರ್ಧರಿಸಿ ತಿಳಿಸಿ ನಾನು ಬರ್ತೇನೆ ಎಂದು ಸವಾಲು ಹಾಕಿದ್ದಾರೆ.
ನಮ್ಮ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುವ ಮೊದಲು ಬಿಜೆಪಿ ನಾಯಕರುಗಳ ಮೇಲೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಸಾಲುಸಾಲು ಹಗರಣಗಳನ್ನು ಇತ್ಯರ್ಥ ಮಾಡಿಕೊಂಡು ಬನ್ನಿ. ಬೊಮ್ಮಾಯಿಯವರೇ ನೀವು ಬೀಸುವ ಕತ್ತಿ ನಿಮ್ಮ ಕುತ್ತಿಗೆಯನ್ನೇ ಕೊಯ್ಯದಿರಲಿ ಎಂದು ಹೇಳಿದ್ದಾರೆ.
ಭ್ರಷ್ಟಾಚಾರವನ್ನೇ ವಿಷಯವನ್ನಾಗಿಟ್ಟು ಚುನಾವಣೆ ಎದುರಿಸುವ ಧಮ್ ನಿಮಗಿದೆಯೇ ಬೊಮ್ಮಾಯಿ ಅವರೇ? ನಿಮಗೆ ಆ ಧಮ್ ಇಲ್ಲ. ಕೊನೆಗೆ ಹಿಂದು-ಮುಸ್ಲಿಮ್, ಮಂದಿರ ಮಸೀದಿ, ಹಿಜಾಬ್ – ಕೇಸರಿ ಶಾಲುಗಳ ವಿವಾದದಲ್ಲಿಯೆ ನಿಮ್ಮ ಪ್ರಚಾರ ಕೊನೆಗೊಳ್ಳುವುದು. ಬೇರೆ ದಾರಿ ನಿಮಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ನನ್ನ ಆಡಳಿತ ಕಾಲದ ಹಗರಣಗಳನ್ನು ಬಯಲಿಗೆಳೆಯುತ್ತೇವೆ ಎಂದು ಕೆಲವು ದಿನಗಳಿಂದ ರಾಜ್ಯ ಬಿಜೆಪಿ ನಾಯಕರು ಹೇಳುತ್ತಲೇ ಇದ್ದಾರೆ. ಮೊನ್ನೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೈಕೋರ್ಟ್ ನೋಟೀಸ್ ನೀಡಿದ್ದನ್ನು ನೋಡಿದರೆ ಇವರು ಹೇಳಿದ್ದು ನನಗೋ, ಯಡಿಯೂರಪ್ಪನವರಿಗೋ? ಎಂದು ಗೊಂದಲವಾಗುತ್ತಿದೆ ಎಂದು ಹೇಳಿದ್ದಾರೆ.