ಸದ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೌತ್ ಇಂಡಿಯನ್ ಇಂಟರ್ ನ್ಯಾಶನಲ್ ಮೂವಿ ಅವಾರ್ಡ್ಸ್ ಕಾರ್ಯಕ್ರಮ ಅದ್ದೂರಿಯಾಗಿ ಜರುಗುತ್ತಿದೆ. ಇಂದು ( ಸೆಪ್ಟೆಂಬರ್ 10 ) ಆರಂಭವಾಗಿರುವ ಸೈಮಾ ಅವಾರ್ಡ್ಸ್ ನಾಳೆಯೂ ಸಹ ಜರುಗಲಿದೆ.
ಈ ಕಾರ್ಯಕ್ರಮಕ್ಕೆ ಚಂದನವನದ ರಾಕಿಂಗ್ ಸ್ಟಾರ್ ಯಶ್, ತೆಲುಗು ಚಿತ್ರರಂಗದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ವಿಜಯ ದೇವರಕೊಂಡ, ತಮಿಳು ಚಿತ್ರರಂಗದ ಉಳಗನಾಯಗನ್ ಕಮಲ್ ಹಾಸನ್ ಮತ್ತು ಹಿಂದಿ ಚಿತ್ರರಂಗದ ನಟ ರಣವೀರ್ ಸಿಂಗ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಾರೆ.
ಇನ್ನು ಈ ಬಾರಿಯ ಸೈಮಾ ಪ್ರಶಸ್ತಿಯಲ್ಲಿ ಕನ್ನಡದ ಪರ ರಾಬರ್ಟ್ 10 ವಿಭಾಗಗಳಲ್ಲಿ ನಾಮಿನೇಟ್ ಆಗಿ ಅತಿ ಹೆಚ್ಚು ವಿಭಾಗಗಳಲ್ಲಿ ನಾಮಿನೇಟ್ ಆದ ಸ್ಯಾಂಡಲ್ ವುಡ್ ಸಿನಿಮಾ ಎನಿಸಿಕೊಂಡಿತ್ತು.
ಹಾಗೂ ರಾಜ್ ಬಿ ಶೆಟ್ಟಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ಗರುಡಗಮನ ವೃಷಭವಾಹನ 8 ವಿಭಾಗಗಳಲ್ಲಿ ನಾಮಿನೇಟ್ ಆಗಿತ್ತು ಮತ್ತು ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರ 7 ವಿಭಾಗಗಳಲ್ಲಿ ನಾಮಿನೇಟ್ ಆಗಿತ್ತು. ಹೀಗೆ ಈ 3 ಚಿತ್ರಗಳ ನಡುವೆ ಈ ಬಾರಿಯ ಸೈಮಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ಜಿದ್ದಾಜಿದ್ದಿ ಏರ್ಪಡಲಿದ್ದು, ಯಾವ ಚಿತ್ರ ಹೆಚ್ಚು ಪ್ರಶಸ್ತಿಗಳನ್ನು ತನ್ನ ಚೀಲಕ್ಕೆ ಹಾಕಿಕೊಳ್ಳಲಿದೆ ಎಂಬ ಕುತೂಹಲ ಮೂಡಿತ್ತು.
ಇನ್ನು ಸದ್ಯ ಪ್ರಶಸ್ತಿ ವಿತರಣೆ ಆರಂಭವಾಗಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಈ ಬಾರಿಯ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕನ್ನಡದ ಪರ ಮೊದಲನೇ ಪ್ರಶಸ್ತಿಯನ್ನು ಬಾಚಿಕೊಳ್ಳುವುದರ ಮೂಲಕ ಖಾತೆಯನ್ನು ತೆರೆದಿದೆ.