Breaking News

ಜಮೀನಿನ 11ಇ (ಹಿಸ್ಸಾ ನಕಾಶೆ), ತತ್ಕಾಲ್ ಪೋಡಿ, ಭೂ ಪರಿವರ್ತನಾ ನಕ್ಷೆಗಾಗಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದು ಚಪ್ಪಲಿ ಸವೆಸುವ ಜಂಜಾಟ ಇನ್ನು ತಪ್ಪಲಿದೆ!

Spread the love

ಬೆಳಗಾವಿ :ಮೀನಿನ 11ಇ (ಹಿಸ್ಸಾ ನಕಾಶೆ), ತತ್ಕಾಲ್ ಪೋಡಿ, ಭೂ ಪರಿವರ್ತನಾ ನಕ್ಷೆಗಾಗಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದು ಚಪ್ಪಲಿ ಸವೆಸುವ ಜಂಜಾಟ ಇನ್ನು ತಪ್ಪಲಿದೆ!

ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಿಂದ ಸಾರ್ವಜನಿಕರಿಗೆ ವಿಳಂಬವಿಲ್ಲದೆ ಸೇವೆ ಕಲ್ಪಿಸುವುದಕ್ಕೆ ‘ಸ್ವಾವಲಂಬಿ’ ವೆಬ್​ಸೈಟ್ ವರದಾನವಾಗಿದೆ.

ಈ ವೆಬ್​ಸೈಟ್ ಮೂಲಕವೇ ಭೂಮಿಯ ಮಾಲೀಕರು ಜಮೀನಿನ 11ಇ (ಹಿಸ್ಸಾ ನಕಾಶೆ), ತತ್ಕಾಲ್ ಪೋಡಿ, ಭೂ ಪರಿವರ್ತನಾ ನಕ್ಷೆ ಇತ್ಯಾದಿ ಪಡೆಯಲು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಏಳೇ ದಿನದಲ್ಲಿ ದಾಖಲೆಗಳು ಕೈ ಸೇರಲಿವೆ.

ಈ ವೆಬ್​ಸೈಟ್ ಆರಂಭವಾದಾಗಿನಿಂದ ರಾಜ್ಯಾದ್ಯಂತ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿದ್ದು, ಶೇ. 70ಕ್ಕಿಂತ ಹೆಚ್ಚು ವಿಲೇವಾರಿಯಾಗಿವೆ. ಈ ಮೊದಲು ನಾಡ ಕಚೇರಿಗೆ ಹೋಗಿ ಜಮೀನಿನ 11ಇ, ಪೋಡಿ ಸೇರಿ ಇತ್ಯಾದಿ ಕಾರ್ಯಗಳಿಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಆ ಅರ್ಜಿಯು ನಾಡಕಚೇರಿಯಲ್ಲಿ ಪರಿಶೀಲನೆಗೊಳಪಟ್ಟು ಸರತಿಯಲ್ಲಿ ಬೀಳುತಿತ್ತು. ಸರತಿಯಿಂದ ಭೂಮಾಪಕರ ಬಳಿ ಹೋಗುತ್ತಿತ್ತು.

ಭೂಮಾಪಕರು ಜಮೀನನ್ನು ಪರಿಶೀಲಿಸಿ, ನಕ್ಷೆ ಗುರುತಿಸಿ ಅಪ್​ಲೋಡ್ ಮಾಡುತ್ತಿದ್ದರು. ಅಪ್​ಲೋಡ್ ಆದ ದಾಖಲೆಯನ್ನು ತಪಾಸಕರ ಮೂಲಕ ಪರಿಶೀಲಿಸಿದ ಬಳಿಕ ಅಂತಿಮ ಅನುಮೋದನೆಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಕಳುಹಿಸಲಾಗುತ್ತಿತ್ತು. ಈ ಎಲ್ಲ ಪ್ರಕ್ರಿಯೆಗೆ ಕನಿಷ್ಠ ಒಂದೂವರೆ ತಿಂಗಳಿಂದ ಎರಡು ತಿಂಗಳು ಸಮಯ ಹಿಡಿಯುತ್ತಿತ್ತು. ಆದರೆ, ‘ಸ್ವಾವಲಂಬಿ’ ವೆಬ್​ಸೈಟ್ ಮೂಲಕ ಸಲ್ಲಿಕೆಯಾಗುವ ಅರ್ಜಿಗಳನ್ನು 7 ದಿನಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ.

ಉದಾಹರಣೆಗೆ ಜಮೀನು ಮಾರಾಟ ಮಾಡುವುದಕ್ಕಾಗಿ ವೆಬ್​ಸೈಟ್​ಗೆ ಸಲ್ಲಿಕೆಯಾಗುವ ಆರ್​ಟಿಸಿಯಲ್ಲಿ ಇರುವ ಹಿಸ್ಸಾ ನಂಬರ್ ನಕ್ಷೆಯ ಅರ್ಜಿಯನ್ನು ಅಧಿಕಾರಿಗಳು ಪರಿಶೀಲಿಸಿ ನಾಗರಿಕ ಖಾತೆಯಲ್ಲಿ ಅಪ್​ಲೋಡ್ ಮಾಡಲಾಗುತ್ತದೆ. ಸಾರ್ವಜನಿಕರು ಸದರಿ ನಕ್ಷೆಯನ್ನು ಡೌನ್​ಲೋಡ್ ಮಾಡಿ, ಮಾರಾಟವಾಗಬೇಕಾದ ಭೂಮಿಯನ್ನು ನಿರ್ದಿಷ್ಟ ಅಳತೆ ಗುರುತಿಸಿ ಮತ್ತೆ ಅಪ್​ಲೋಡ್ ಮಾಡಬೇಕು.

ತದನಂತರ ಭೂಮಾಪನ ಇಲಾಖೆ ಅದನ್ನು ಪುನಃ ಪರಿಶೀಲಿಸಿದ ಬಳಿಕ ಅನುಮೋದಿಸಿ, ದೃಢೀಕರಿಸಿ ಮತ್ತೆ ಅಪ್​ಲೋಡ್ ಮಾಡಲಾಗುತ್ತದೆ. ಇದನ್ನು ಪ್ರಿಂಟ್ ಪಡೆದು ಮಾರಾಟಕ್ಕೆ ನೋಂದಣಿ ಮಾಡಿಕೊಡಬಹುದು. ಈ ಪ್ರಕ್ರಿಯೆ ಮುಗಿದ ಬಳಿಕ ಪ್ರತ್ಯೇಕವಾಗಿ ಪಹಣಿ ದೊರೆಯಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಮೋಜಣಿ-ಕಾವೇರಿಗೆ ಲಿಂಕ್: ‘ಸ್ವಾವಲಂಬಿ’ ವೆಬ್​ಸೈಟ್ ಅನ್ನು ಭೂಮಾಪನ ಇಲಾಖೆಯ ‘ಮೋಜಣಿ’ ಹಾಗೂ ಉಪನೋಂದಣಿ ಇಲಾಖೆಯ ‘ಕಾವೇರಿ’ ತಂತ್ರಾಂಶಕ್ಕೆ ಲಿಂಕ್ ಮಾಡಲಾಗಿದೆ.

ಹಿಸ್ಸಾ ನಕಾಶೆ, ಆರ್​ಟಿಸಿ (ಪಹಣಿ) ಹಾಗೂ ನೋಂದಾಯಿತ ಮೊಬೈಲ್ ನಂಬರ್ ಇರುವ ಆಧಾರ್ ಕಾರ್ಡ್ ತಾಳೆಯಾದರೆ ಮಾತ್ರ ಈ ವೆಬ್​ಸೈಟ್​ನಲ್ಲಿ ಅರ್ಜಿಗಳು ಸ್ವೀಕೃತವಾಗುತ್ತವೆ. ಕಡ್ಡಾಯವಾಗಿ ಜಮೀನಿನ ಆರ್​ಟಿಸಿ ನಂಬರ್ ಇದ್ದರೆ ಮಾತ್ರ ಅರ್ಜಿ ಮಾನ್ಯವಾಗುತ್ತದೆ. rdservices.karnataka.gov.in ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸಿ ಸೇವೆ ಪಡೆಯಬಹುದು.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ

Spread the love ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳಗಾವಿಯಲ್ಲಿ ಒಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ