ಮಂಡ್ಯ: ಹಬ್ಬಕ್ಕೆಂದು ಸಾಮಗ್ರಿಗಳನ್ನು ತರಲು ಹೋಗಿದ್ದ ಮಹಿಳೆಗೆ ಗಣಿಗಾರಿಕೆಯ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ನಡೆದಿದೆ.
ಚೋಕನಹಳ್ಳಿ ಗ್ರಾಮದ ಜ್ಯೋತಿ ಮೃತ ಮಹಿಳೆ. ಜ್ಯೋತಿ ಇಂದು ಮಧ್ಯಾಹ್ನ ಹಬ್ಬದ ಸಾಮಗ್ರಿಗಳನ್ನು ಖರೀದಿ ಮಾಡಲು ಚೋಕನಹಳ್ಳಿಯಿಂದ ಬೂಕನಕೆರೆಗೆ ಬಂದಿದ್ದರು. ನಂತರ ಹಬ್ಬದ ಸಾಮಗ್ರಿಗಳನ್ನು ಖರೀದಿ ಮಾಡಿ ಮನೆಗೆ ವಾಪಸ್ಸು ಹೋಗುವ ವೇಳೆ ಗಣಿಗಾರಿಕೆಯ ಲಾರಿಯೊಂದು ಜ್ಯೋತಿಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಜ್ಯೋತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತ ಮಾಡಿದ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಲಾರಿ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಮಾಡುವವರದ್ದು ಎನ್ನಲಾಗುತ್ತಿದೆ. ಜ್ಯೋತಿಗೆ ಎರಡು ಪುಟ್ಟ ಹೆಣ್ಣು ಮಕ್ಕಳಿದ್ದು, ತಾಯಿ ಕಳೆದುಕೊಂಡ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.
ಜ್ಯೋತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಬೇಕೆಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆ ಕೆಆರ್‌ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.