ಬೆಳಗಾವಿ: ಅರಣ್ಯ ಸಚಿವರಾಗಿದ್ದ ಉಮೇಶ್ ಕತ್ತಿ ನಿಧನದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಡಾ. ಕೆ. ಸುಧಾಕರ್, ಮುನಿರತ್ನ ಭೈರತಿ ಬಸವರಾಜ ಸೇರಿದಂತೆ ಹಲವು ಗಣ್ಯರು ಬೆಲ್ಲದ ಬಾಗೇವಾಡಿಯ ಅವರ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ನಿವಾಸದಲ್ಲಿ ಉಮೇಶ್ ಕತ್ತಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಗಣ್ಯರು, ಉಮೇಶ್ ಕತ್ತಿ ಅವರ ಪತ್ನಿ ಶೀಲಾ, ಪುತ್ರ ನಿಖಿಲ್, ಸಹೋದರ ರಮೇಶ್ ಕತ್ತಿ ಇವರ ಮಕ್ಕಳಾದ ಪೃಥ್ವಿ ಮತ್ತು ಪವನ್ ಸೇರಿದಂತೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಭೇಟಿ ಬಳಿಕ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, ಸಚಿವ ಉಮೇಶ ಕತ್ತಿ ನನ್ನ ವೈಯಕ್ತಿಕ ಮಿತ್ರ. ಬೆಳಗಾವಿ, ಬೆಂಗಳೂರು, ದೆಹಲಿಯಲ್ಲಿ ಅನೇಕ ಸಲ ಚರ್ಚೆ ಮಾಡಿದ್ದೇವೆ. ರಾಜ್ಯದ ಅಭಿವೃದ್ಧಿ, ಪಕ್ಷ ಕಟ್ಟುವ ಬಗ್ಗೆ ಅನೇಕ ಸಲಹೆ ನೀಡುತ್ತಿದ್ದರು. ಉಮೇಶ ಕತ್ತಿ ಬಿಂದಾಸ್ ವ್ಯಕ್ತಿಯಾಗಿದ್ದರು. ಪಕ್ಷ, ರಾಜ್ಯಕ್ಕೆ ಉಮೇಶ ಕತ್ತಿ ಅಗಲಿಕೆಯಿಂದ ನಷ ಆಗಿದೆ. 40 ವರ್ಷಗಳ ಕಾಲ ಜನ ಆಶೀರ್ವಾದ ಮಾಡಿದ್ದಾರೆ. 40 ವರ್ಷಗಳ ರಾಜಕೀಯ ಜೀವನದ ಕುರಿತು ಪುಸ್ತಕದ ರೂಪದಲ್ಲಿ ಹೊರ ಬರಬೇಕು ಎಂದರು.