Breaking News

ಕರ್ನಾಟಕದ ನೀಟ್ ಸಾಧನೆ: ಟಾಪ್ 50 ಪಟ್ಟಿಯಲ್ಲಿ 9 ರ‌್ಯಾಂಕ್; 72000 ವಿದ್ಯಾರ್ಥಿಗಳಿಗೆ ಅರ್ಹತೆ

Spread the love

ಬೆಂಗಳೂರು: ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆಯಲ್ಲಿ (ನೀಟ್) ರಾಜ್ಯದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮೆರೆದಿದ್ದಾರೆ. ಅಖಿಲ ಭಾರತ ಮಟ್ಟದ ಟಾಪ್ 20ರಲ್ಲಿ 6 ಹಾಗೂ 50ರ ಪಟ್ಟಿಯಲ್ಲಿ ಒಟ್ಟು 9 ಅಭ್ಯರ್ಥಿಗಳು ಸ್ಥಾನ ಪಡೆೆದಿದ್ದಾರೆ.

ಇದಲ್ಲದೆ, ವಿವಿಧ ವಿಭಾಗಗಳಲ್ಲಿನ ಟಾಪರ್​ಗಳನ್ನು ಸೇರಿಸಿದಲ್ಲಿ ಸಂಖ್ಯೆ 14ಕ್ಕೆ ಏರಿಕೆಯಾಗುತ್ತದೆ. ಈ ಮೂಲಕ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿದಂತಾಗಿದೆ.

ಅರ್ಹತೆಯಲ್ಲೂ ರೆಕಾರ್ಡ್: ಈ ಬಾರಿ ರಾಜ್ಯದ 1,22,423 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಒಟ್ಟಾರೆ 72,262 ಜನರು ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ಕಳೆದ ಸಾಲಿಗೆ ಹೋಲಿಸಿದಲ್ಲಿ ಈ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಕಳೆದ ವರ್ಷ 89,359 ಜನರು ಪರೀಕ್ಷೆಗೆ ಹಾಜರಾಗಿ 55,009 ಜನರು ಅರ್ಹತೆ ಗಿಟ್ಟಿಸಿಕೊಂಡಿದ್ದರು. ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶವನ್ನು ಹೊರತುಪಡಿಸಿದರೆ ರಾಜ್ಯದ ವಿದ್ಯಾರ್ಥಿಗಳೇ ಹೆಚ್ಚಿನ ಪ್ರಮಾಣದಲ್ಲಿ ಅರ್ಹತೆ ಪಡೆದಿರುವುದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ಸಾಬೀತಾಗಿದೆ. ಸಾಮಾನ್ಯವಾಗಿ ಉತ್ತರಭಾರತದ ವಿದ್ಯಾರ್ಥಿಗಳು ನೀಟ್​ನಲ್ಲಿ ಉತ್ತಮ ಸಾಧನೆ ತೋರುತ್ತಿದ್ದರು. ಈ ಬಾರಿ ದಕ್ಷಿಣದಲ್ಲಿ ಅದರಲ್ಲೂ ರಾಜ್ಯದ ವಿದ್ಯಾರ್ಥಿಗಳು ಮುಂದಿರುವುದು ವಿಶೇಷವಾಗಿದೆ. ತಮಿಳುನಾಡಿನಲ್ಲಿ 1.20 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ, ಅರ್ಹತೆ ಪಡೆದವರ ಸಂಖ್ಯೆ 67,782. ಕೇರಳದಲ್ಲಿ 64 ಸಾವಿರ ಜನರು ಅರ್ಹತೆಗೆ ಪಾತ್ರರಾಗಿದ್ದಾರೆ. ಉತ್ತರಪ್ರದೇಶದಲ್ಲಿ 1.17 ಲಕ್ಷ ಹಾಗೂ ಮಹಾರಾಷ್ಟ್ರದಲ್ಲಿ 1.13 ಲಕ್ಷ ವಿದ್ಯಾರ್ಥಿಗಳು ಅರ್ಹತೆ ಗಳಿಸಿ ರಾಷ್ಟ್ರಮಟ್ಟದಲ್ಲಿ ಮೊದಲೆರಡು ಸ್ಥಾನದಲ್ಲಿದ್ದಾರೆ.

ರಾಜ್ಯಕ್ಕೆ 650 ಹೆಚ್ಚುವರಿ ವೈದ್ಯಕೀಯ ಸೀಟುಗಳು ಲಭ್ಯ: ರಾಜ್ಯಕ್ಕೆ ಈ ಬಾರಿ 650 ಹೆಚ್ಚುವರಿ ವೈದ್ಯಕೀಯ ಪದವಿ ಹಾಗೂ 216 ಪಿಜಿ ಸೀಟುಗಳು ಲಭ್ಯವಾಗಿವೆ. ಈ ಮೂಲಕ ಒಟ್ಟು ಎಂಬಿಬಿಎಸ್ ಸೀಟುಗಳ ಸಂಖ್ಯೆ 10,795 ಹಾಗೂ ಪಿಜಿ ಸೀಟುಗಳ ಪ್ರಮಾಣ 5360ಕ್ಕೆ ಏರಿಕೆಯಾಗಿದೆ. ಇದಲ್ಲದೆ, ತಮಿಳುನಾಡು ಎಂಜಿಆರ್ ವಿವಿ ವ್ಯಾಪ್ತಿಗೆ ಸೇರಿರುವ ಬೆಂಗಳೂರಿನ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಕೂಡ ರಾಜ್ಯದ ಆರೋಗ್ಯ ವಿವಿ ವ್ಯಾಪ್ತಿಗೆ ಒಳಪಟ್ಟರೆ ಸೀಟುಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಹಾವೇರಿ, ಯಾದಗಿರಿ ಹಾಗೂ ಚಿಕ್ಕಮಗಳೂರು ಸರ್ಕಾರಿ ವೈದ್ಯ ಕಾಲೇಜುಗಳ ಸೀಟುಗಳ ಸಂಖ್ಯೆಯನ್ನು ತಲಾ 150ಕ್ಕೆ ಏರಿಸಲಾಗಿದೆ. ಬಳ್ಳಾರಿ ವಿಜಯನಗರ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯನ್ನು 150ರಿಂದ 200ಕ್ಕೆ ಹೆಚ್ಚಿಸಲಾಗಿದೆ.


Spread the love

About Laxminews 24x7

Check Also

ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ! 6 ಬಾರಿ ತಲಾಖ್, ಅಬಾರ್ಷನ್

Spread the loveಬೆಂಗಳೂರು, ಜುಲೈ 1: ಗಂಡನಾದವನೇ ಹೆಂಡತಿಯನ್ನು ಬೇರೆಯವರ ಜತೆ ಮಲಗುವಂತೆ ಪೀಡಿಸಿದರೆ, ಅದಕ್ಕಾಗಿ ಹಿಂಸಿಸಿದರೆ ಮಹಿಳೆಯ ಸ್ಥಿತಿ ಹೇಗಾಗಬಹುದು! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ