ಬೆಳಗಾವಿ: ಮಕ್ಕಳ ಕಳವಿಗೆ ಯತ್ನಿಸಿದವನೊಬ್ಬ ಸಾರ್ವಜನಿಕರ ಕೈಗೆ ಸಿಕ್ಕಿಹಾಕಿಕೊಂಡು ಏಟು ಬೀಳುತ್ತಿದ್ದಂತೆ ತಪ್ಪಿಸಿಕೊಂಡು ಪರಾರಿಯಾದ ಪ್ರಕರಣವೊಂದು ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಮಕ್ಕಳ ಕಳ್ಳರು ಕಾಣಿಸಿಕೊಂಡಿದ್ದು, ಜನತೆಯಲ್ಲಿ ಆತಂಕ ಮೂಡಿದೆ.
ಸೋಮವಾರ ಮಧ್ಯಾಹ್ನ ವೇಳೆ ಪಟ್ಟಣದ ಪಿಂಜಾರ ಗಲ್ಲಿಯಲ್ಲಿ ಮಕ್ಕಳ ಕಳ್ಳನೋರ್ವ ಚಿಕ್ಕ ಬಾಲಕನನ್ನು ಕಳ್ಳತನ ಮಾಡಿ ಕರೆದೊಯ್ಯುವಾಗ ಗಲ್ಲಿಯ ಜನತೆಯಿಂದ ಧರ್ಮದೇಟು ತಿಂದು ಪರಾರಿಯಾದ ಘಟನೆ ನಡೆದಿದೆ.
ಸ್ವಯಂ ಸತೀಶ ಅರವಳ್ಳಿ ಎಂಬ ನಾಲ್ಕು ವರ್ಷದ ಬಾಲಕನು ಮನೆಯ ಮುಂದೆ ಆಟವಾಡುತ್ತಿದ್ದಾಗ ಕಳ್ಳನು ಐಸ್ಕ್ರೀಮ್ ಮಾರಾಟ ಮಾಡುವ ವೇಷದಲ್ಲಿ ಬಂದು ಬಾಲಕನನ್ನು ಡಬ್ಬಿಯಲ್ಲಿ ತುಂಬಿಕೊಂಡಿದ್ದಾನೆ. ಬಾಲಕ ಅಳಲು ಪ್ರಾರಂಭಿಸಿದ್ದಾನೆ. ಬಾಲಕನು ಕಿರುಚಾಡುವ ಶಬ್ದ ಕೇಳಿ ತಾಯಿ ಆಶಾ ಮನೆಯಿಂದ ಹೊರಗೆ ಬಂದು ನಮ್ಮ ಮಗನನ್ನು ಏಕೆ ಡಬ್ಬಿಯಲ್ಲಿ ಕುಳಿಸಿಕೊಂಡು ಹೋಗುತ್ತಿರುವೆ ಎಂದು ಪ್ರಶ್ನಿಸಿದ್ದಾಳೆ.
ಆಗ ಅವನು ಮಾತನಾಡದೆ ಸುಮ್ಮನಾದಾಗ ಕೂಗಾಡಿ ಜನರನ್ನು ಸೇರಿಸಿದ್ದಾಳೆ. ಅಲ್ಲಿ ಸೇರಿದ ಜನರು ಕಳ್ಳನನ್ನು ಪ್ರಶ್ನಿಸಿದಾಗ ಅವನು ಮಾತನಾಡದೆ ಸುಮ್ಮನಿದ್ದಾಗ ಥಳಿಸಿದ್ದಾರೆ. ಅಷ್ಟರಲ್ಲಿ ಕಳ್ಳನು ಕೊಸರಿಕೊಂಡು ಜವಳಿ ಖೂಟನತ್ತ ಪರಾರಿಯಾಗಿದ್ದಾನೆ. ಕಳ್ಳನು ಸುಮಾರು 35-40 ವರ್ಷದವನಿದ್ದು, ಕಪ್ಪಗೆ ಗಡ್ಡದಾರಿಯಾಗಿದ್ದಾನೆ. ಅವನು ಕನ್ನಡ ಬಲ್ಲವನಲ್ಲ ಬೇರೆ ರಾಜ್ಯದವನು ಇರಬಹುದೆಂದು ಮಾತನಾಡಿಕೊಳ್ಳುತ್ತಿದ್ದಾರೆ.