ಬೆಂಗಳೂರು: ಕೋಣನಕುಂಟೆ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ಸಾವು ಹೇಗಾಯಿತೆಂಬ ಪ್ರಾಥಮಿಕ ಮಾಹಿತಿಯನ್ನು ಕಲೆಹಾಕಿದ್ದಾರೆ.
‘ಚುಂಚನಕಟ್ಟೆ ಎಸ್‌ಬಿಐ ಲೇಔಟ್ ನಿವಾಸಿ ಮಹೇಶ್ ಕುಮಾರ್ (44), ಪತ್ನಿ ಜ್ಯೋತಿ (29) ಹಾಗೂ ಮಗ ನಂದೀಶ್ ಗೌಡ (9) ಅವರ ಮೃತದೇಹಗಳು ಆಗಸ್ಟ್ 18ರಂದು ಮನೆಯಲ್ಲಿ ಪತ್ತೆಯಾಗಿದ್ದವು.
ಮೂವರ ಸಾವು ನಿಗೂಢವಾಗಿತ್ತು. ತನಿಖೆ ಕೈಗೊಂಡಾಗ ಕೊಲೆ ನಡೆದಿರುವುದು ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಬಿಬಿಎಂಪಿ ಗುತ್ತಿಗೆದಾರರೊಬ್ಬರ ಬಳಿ ಕೆಲಸ ಮಾಡುತ್ತಿದ್ದ ಮಹೇಶ್‌ಕುಮಾರ್ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಹಲವು ವೈದ್ಯರ ಬಳಿ ತೋರಿಸಿದರೂ ಗುಣಮುಖವಾಗಿ ರಲಿಲ್ಲ. ಇದರಿಂದ ಬೇಸತ್ತಿದ್ದ ಮಹೇಶ್, ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು. ಇದೇ ವಿಷಯವನ್ನು ಪತ್ನಿ ಜ್ಯೋತಿಗೆ ಹೇಳಿದ್ದರು. ಆದರೆ, ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ ವೆಂದು ಜ್ಯೋತಿ ಹೇಳಿದ್ದರೆಂದು ತಿಳಿದುಬಂದಿದೆ.’
‘ಆತ್ಮಹತ್ಯೆ ವಿಚಾರವಾಗಿ ಮನೆಯಲ್ಲಿ ಗಲಾಟೆ ಆಗಿರುವ ಮಾಹಿತಿಯೂ ಇದೆ. ಸಿಟ್ಟಾಗಿದ್ದ ಮಹೇಶ್, ಪತ್ನಿ ಹಾಗೂ ಮಗನನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ಸದ್ಯದ ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿವೆ.
ಐದು ಗಂಟೆ ಬಳಿಕ ಆತ್ಮಹತ್ಯೆ: ‘ಪತ್ನಿ ಹಾಗೂ ಮಗನನ್ನು ಕೊಲೆ ಮಾಡಿದ ಬಳಿಕ ಮಹೇಶ್, ಮನೆಯಲ್ಲೇ ಸುಮಾರು ಐದು ಗಂಟೆ ಕಳೆದಿದ್ದರು. ‘ಆರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂಬುದಾಗಿ ಮರಣಪತ್ರ ಬರೆದಿಟ್ಟು, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.