ಮುಂಬೈ(ಮಹಾರಾಷ್ಟ್ರ): ದೇಶದಲ್ಲಿ ಈಗಾಗಲೇ 5G ತರಂಗಾಂತರ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಮುಖೇಶ್ ಅಂಬಾನಿ ಒಡೆತನದ ಜಿಯೋ ಸಂಸ್ಥೆ 7,864 ಕೋಟಿ ರೂಪಾಯಿ ವ್ಯಯಿಸಿ ಹೆಚ್ಚಿನ ಸ್ಪೆಕ್ಟ್ರಮ್ ಖರೀದಿಸಿದೆ. ಇದರ ಬೆನ್ನಲ್ಲೇ ಇಂದು ಅಂಬಾನಿ ಮಹತ್ವದ ಘೋಷಣೆ ಮಾಡಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ನ 45ನೇ ವಾರ್ಷಿಕ ಸಭೆಯ ಉದ್ದೇಶಿಸಿ ಮಾತನಾಡಿರುವ ಮುಖೇಶ್ ಅಂಬಾನಿ, ಗ್ರಾಹಕರಿಗೆ ದೀಪಾವಳಿ ಗಿಫ್ಟ್ ನೀಡಿದ್ದಾರೆ. ವಿಶ್ವದ ಅತ್ಯಂತ ವೇಗದ 5ಜಿ ರೋಲ್ಔಟ್ಗೆ ಸಿದ್ಧಗೊಂಡಿದೆ. ದೀಪಾವಳಿ ಹೊತ್ತಿಗೆ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾ ಮೆಟ್ರೋ ನಗರಗಳು ಒಳಗೊಂಡಂತೆ ಪ್ರಮುಖ ನಗರಗಳಲ್ಲಿ 5G ಸೇವೆ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದರು.
ಡಿಸೆಂಬರ್ 2023 ರ ಸಂದರ್ಭಕ್ಕೆ ಭಾರತದ ಪ್ರತೀ ಪಟ್ಟಣ, ತಾಲೂಕು ಮತ್ತು ತಹಸಿಲ್‌ಗಳಿಗೆ ಜಿಯೋ 5G ಸೇವೆ ತಲುಪಿಸಲು ನಿರ್ಧರಿಸಲಾಗಿದೆ ಎಂದು ಅವರು ಇದೇ ವೇಳೆ ಹೇಳಿದರು. ಜಿಯೋ 5ಜಿ ಸೇವೆಯನ್ನು ಪ್ರತಿಯೊಬ್ಬರಿಗೂ, ಪ್ರತಿ ಸ್ಥಳಕ್ಕೂ ಹಾಗೂ ಅತ್ಯುನ್ನತ ಗುಣಮಟ್ಟದಲ್ಲಿ ನೀಡಬೇಕೆಂಬ ಮಹತ್ವಾಕಾಂಕ್ಷೆ ನಮ್ಮದು. ಅದಕ್ಕಾಗಿ ಕೈಗೆಟಕುವ ದರದಲ್ಲಿ ನೀಡಲಾಗುವುದು ಎಂದು ಅವರು ಪ್ರಕಟಿಸಿದರು. ನೆಟ್ವರ್ಕ್ನಲ್ಲಿ ಚೀನಾ ಮತ್ತು ಯುಎಸ್‌ಗಿಂತಲೂ ಮುಂದಿರುವ ನಾವು, ಡೇಟಾ ಚಾಲಿತ ಆರ್ಥಿಕತೆ ಮಾಡಲು ಬದ್ಧರಾಗಿದ್ದೇವೆ ಎಂದೂ ಅಂಬಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.