ರಾಮದುರ್ಗ: ಮಳೆಗಾಲದ ಸಂದರ್ಭದಲ್ಲಿ ಗ್ರಾಮದ ಜನರು ಅನುಭವಿಸುತ್ತಿದ್ದ ಸಮಸ್ಯೆ ಯನ್ನು ನಿವಾರಿಸುವ ನಿಟ್ಟಿನಲ್ಲಿ ಸೇತುವೆ ನಿರ್ಮಾಣಕ್ಕೆ ಮುಂದಾಗಿರುವುದಾಗಿ ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಹುಬ್ಬಳ್ಳಿ ಕೆ.ಆರ್.ಡಿ.ಸಿ.ಎಲ್ ನ 80 ಲಕ್ಷ ಅನುದಾನದಲ್ಲಿ ಕಲ್ಲೂರ-ಮಾರಡಗಿ ರಸ್ತೆಯ ಮಧ್ಯೆ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮದ ಹಾಗೂ ಮುಳ್ಳೂರ ಸುತ್ತಲಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಸೇತುವೆ ಕಾರ್ಯವನ್ನು ಕೈಗೊಂಡು ಅನುಕೂಲ ಕಲ್ಪಿಸಲಾಗುತ್ತಿದೆ. ಮಳೆ ಬಂದಾಗ ಹಳ್ಳದ ನೀರು ಗ್ರಾಮದೊಳಗೆ ನುಗ್ಗಿ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಈಗ ಕಾಮಗಾರಿ ಕೈಗೊಂಡಿದ್ದು, ಗುತ್ತಿಗೆದಾರರು ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು. ಕಳಪೆ ಕೆಲಸ ಕಂಡು ಬಂದಲ್ಲಿ ಗ್ರಾಮಸ್ಥರು ತಮ್ಮ ಅಥವಾ ಅಧಿಕಾರಿಗಳ ಗಮನಕ್ಕೆ ತಂದಲ್ಲಿ ಅಗತ್ಯ ಕ್ರಮ ವಹಿಸುವುದಾಗಿ ಹೇಳಿದರು.
ಗ್ರಾಮಸ್ಥರ ಇನ್ನುಳಿದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈಗಾಗಲೇ ಮುಳ್ಳೂರ ಗ್ರಾಪಂ ವ್ಯಾಪ್ತಿಯಲ್ಲಿ ಕೋಟ್ಯಾಂತರ ರೂ. ಅನುದಾನದಲ್ಲಿ ಅನೇಕ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಜಿ.ಪಂ ಮಾಜಿ ಸದಸ್ಯ ರೇಣಪ್ಪ ಸೋಮಗೊಂಡ ಮಾತನಾಡಿದರು.