ಬೆಂಗಳೂರು: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಬಿಗ್ ರಿಲೀಫ್ ಪಡೆದುಕೊಂಡಿದ್ದ ಮಾಜಿ ಸಚಿವ ಈಶ್ವರಪ್ಪಗೆ ಇದೀಗ ಮತ್ತೆ ಸಂಕಷ್ಟ ಶುರವಾಗಿದೆ.
ಪ್ರಕರಣದಲ್ಲಿ ಮಾಜಿ ಸಚಿವರಿಗೆ ಕ್ಲೀನ್‌ಚಿಟ್ ನೀಡಿದ್ದ ತನಿಖಾಧಿಕಾರಿಗಳ ಕ್ರಮ ಪ್ರಶ್ನಿಸಿ ಸಂತೋಷ್ ಪಾಟೀಲ್ ಕುಟುಂಬ ಸದಸ್ಯರು ಕೋರ್ಟ್ ಮೊರೆ ಹೋಗಿದ್ದಾರೆ.
ಪ್ರಕರಣದ ಸಂಬಂಧ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಸಲ್ಲಿಸಿರುವ ಬಿ-ವರದಿ ಪ್ರಶ್ನಿಸಿ ಮೃತ ಸಂತೋಷ್ ಪಾಟೀಲ್ ಸಹೋದರ ಪ್ರಶಾಂತ್ ಪಾಟೀಲ್ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪ್ರತಿರೋಧ ಅರ್ಜಿ (ಪ್ರೊಟೆಸ್ಟ್ ಪಿಟಿಷನ್) ಸಲ್ಲಿಸಿದ್ದಾರೆ. ಬುಧವಾರ ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಅರ್ಜಿ ಏನು?
ಗುತ್ತಿಗೆದಾರ ಸಂತೋಷ್ ಪಾಟೀಲ್ ನಡೆಸಿರುವ ಕಾಮಗಾರಿಗಳು ಹಾಗೂ ಈ ಸಂಬಂಧ ಈಶ್ವರಪ್ಪ ಜತೆ ನಡೆಸಿರುವ ಮಾತುಕತೆಗೆ ಸಂಬಂಧಿಸಿದಂತೆ ಹಲವು ದಾಖಲೆಗಳಿವೆ. ಸಂತೋಷ್ ಆತ್ಮಹತ್ಯೆಗೆ ಈಶ್ವರಪ್ಪ ಅವರೇ ನೇರ ಹೊಣೆ ಎಂಬುದನ್ನು ಸಾಬೀತುಪಡಿಸುವ ಸಾಕಷ್ಟು ದಾಖಲೆಗಳು ಇದೆ. ಆದರೂ ತನಿಖಾಧಿಕಾರಿಗಳು ಮಾಜಿ ಸಚಿವರ ವಿರುದ್ಧ ಬಿ-ರಿಪೋರ್ಟ್ ಸಲ್ಲಿಸಿದ್ದಾರೆ. ಸಂತೋಷ್ ಪಾಟೀಲ್ ಆತ್ಮಹತ್ಯೆಯ ಹಿಂದೆ ಹಲವು ಪ್ರಭಾವಿಗಳ ಕೈವಾಡವಿದೆ. ಎಸ್‌ಐಟಿ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸದೆ, ರಾಜಕೀಯ ಪ್ರಭಾವಕ್ಕೊಳಗಾಗಿ ಈಶ್ವರಪ್ಪಗೆ ಕ್ಲೀನ್‌ಚಿಟ್ ನೀಡಿದ್ದು, ತನಿಖಾಧಿಕಾರಿಗಳ ಬಿ-ರಿಪೋರ್ಟ್ ವಜಾಗೊಳಿಸಬೇಕು ಎಂದು ಪ್ರಶಾಂತ್ ಪಾಟೀಲ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.