ಬೆಂಗಳೂರು: ರಾಜ್ಯ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಜನೋತ್ಸವ ಕಾರ್ಯಕ್ರಮ ಮತ್ತೆ ಮುಂದೂಡಿಕೆಯಾಗಿದೆ.
ಆ.28 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿತ್ತು. ಈ ಕುರಿತಂತೆ ಪೂರ್ವ ಸಿದ್ಧತಾ ಸಭೆಗಳನ್ನೂ ನಡೆಸಲಾಗಿತ್ತು.
ಆದರೆ, ಆಗಸ್ಟ್ ಕೊನೆ ವಾರದಲ್ಲಿ ಗಣೇಶ ಚತುರ್ಥಿ ಇರುವುದರಿಂದ ಆ ಸಂದರ್ಭದಲ್ಲಿ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಂಡರೆ ಜನರನ್ನು ಸೇರಿಸುವುದು ಸಮಸ್ಯೆಯಾಗುವ ಕಾರಣಕ್ಕೆ ಜನೋತ್ಸವ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆಗಸ್ಟ್ ಕೊನೆ ವಾರದಲ್ಲಿ ಗಣೇಶೋತ್ಸವ ಇರುವುದರಿಂದ ಜನೋತ್ಸವ ಮುಂದೂಡಲಾಗಿದೆ. ಶೀಘ್ರವೇ ಮುಂದಿನ ದಿನಾಂಕ ತಿಳಿಸುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಲೇವಡಿ
ಜನೋತ್ಸವ ಮುಂದೂಡಿಕೆ ಬಗ್ಗೆ ಬಿಜೆಪಿ ಕಾಲೆಳೆದಿರುವ ಕಾಂಗ್ರೆಸ್, ಮುಖ್ಯಮಂತ್ರಿ ಬದಲಾವಣೆ ಹೇಳಿಕೆಗಳಿಗೂ ಇದಕ್ಕೂ ಸಂಬಂಧ ಇದೆಯೇ ಎಂದು ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಮತ್ತೂಮ್ಮೆ ಜನೋತ್ಸವ ಮುಂದೂಡಲಾಗಿದೆಯಂತೆ. ಬಿಜೆಪಿ ಭ್ರಷ್ಟೋತ್ಸವ ಮಾಡುತ್ತಿರುವ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಅವರಿಗೆ ಜನೋತ್ಸವ ಮಾಡುವ ಶಕ್ತಿಯೂ ಇರಲಿಲ್ಲ. ಈಗ ಯೋಗವೂ ಇಲ್ಲ ಎಂದೆನಿಸುತ್ತದೆ ಎಂದು ಹೇಳಿದೆ.