ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಘೋಷಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷವು, ‘ಬಿಜೆಪಿಯ ಉನ್ನತ ನಾಯಕತ್ವದ ವಿರುದ್ಧ ಯೋಗಿ ಆದಿತ್ಯನಾಥ್ ದಂಗೆ ಎದ್ದಂತಿದೆ’ ಎಂದು ಹೇಳಿದೆ.
ಕಳೆದ ತಿಂಗಳು ಉತ್ತರ ಪ್ರದೇಶದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ‘ಉಚಿತ ಕೊಡುಗೆಗಳನ್ನು ನೀಡುವ ಸಂಸ್ಕೃತಿ ದೇಶದ ಅಭಿವೃದ್ಧಿಗೆ ಅಪಾಯಕಾರಿ’ ಎಂದು ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿಯವರು ಉಚಿತ ಕೊಡುಗೆಗಳನ್ನು ವಿರೋಧಿಸುತ್ತಿದ್ದಾರೆ. ಇದರ ನಡುವೆಯೂ ಉತ್ತರ ಪ್ರದೇಶ ಮುಖ್ಯಮಂತ್ರಿ ‘ಕೇಜ್ರಿವಾಲ್ ಮಾದರಿ’ಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಎಎಪಿ ತಿಳಿಸಿದೆ.
ಇದಕ್ಕೂ ಮುನ್ನ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಆದಿತ್ಯನಾಥ್, ‘ಉತ್ತರ ಪ್ರದೇಶದಲ್ಲಿ 60 ವರ್ಷ ಮೇಲ್ಪಟ್ಟ ತಾಯಂದಿರು ಮತ್ತು ಸಹೋದರಿಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಿದ್ದೇವೆ’ ಎಂದು ಘೋಷಿಸಿದ್ದಾರೆ.
ಆದಿತ್ಯನಾಥ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಎಎಪಿ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ‘ಬಿಹಾರದ ನಂತರ, ಉತ್ತರ ಪ್ರದೇಶದಲ್ಲಿ ಮೋದಿ ವಿರುದ್ಧ ಬಂಡಾಯವೆದ್ದಂತೆ ತೋರುತ್ತಿದೆ’ ಎಂದು ಹೇಳಿದ್ದಾರೆ.
ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿ ಸದಸ್ಯೆ ಅತಿಶಿ ಸಹ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಪ್ರಧಾನಿ ಮೋದಿ ಉಚಿತ ಸೇವೆಗಳನ್ನು ವಿರೋಧಿಸುತ್ತಾರೆ. ಯೋಗಿ ಉಚಿತ ಕೊಡುಗೆಗಳನ್ನು ನೀಡುತ್ತಿದ್ದಾರೆ. ಬಿಜೆಪಿಯೊಳಗೆ ಕದನದ ಕುರುಹುಗಳು ಸ್ಪಷ್ಟವಾಗುತ್ತಿವೆ’ ಎಂದು ಟ್ವೀಟಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಪಕ್ಷದ ಮುಖಂಡರ ಟ್ವೀಟ್‌ಗಳನ್ನು ಮರುಟ್ವೀಟ್ ಮಾಡಿದ್ದಾರೆ.
Laxmi News 24×7