(ಕೊಪ್ಪಳ): ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರ ಹುಲಿಗಿಯ ಹುಲಿಗೆಮ್ಮ ದೇವಿಯ ಚರಿತ್ರೆ ಮತ್ತು ಪವಾಡ ಬಿಂಬಿಸುವ ‘ವಿಶ್ವರೂಪಿಣಿ ಹುಲಿಗೆಮ್ಮ’ ಸಿನಿಮಾ ಚಿತ್ರೀಕರಣಕ್ಕೆ ಮಂಗಳವಾರ ದೇವಸ್ಥಾನದ ಆವರಣದಲ್ಲಿ ಚಾಲನೆ ಲಭಿಸಿತು.
ಹುಲಿಗೆಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಘಟಕದ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್ ಶುಭಕೋರಿ ಚಿತ್ರೀಕರಣಕ್ಕೆ ಚಾಲನೆ ಕೊಟ್ಟರು.
ಚಲನಚಿತ್ರದ ನಿರ್ದೇಶಕ ಓಂಸಾಯಿಪ್ರಕಾಶ್ ಮಾತನಾಡಿ ‘ಹುಲಿಗೆಮ್ಮದೇವಿಗೆ ಹೊರರಾಜ್ಯದಲ್ಲೂ ಭಕ್ತರಿದ್ದಾರೆ. ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿದ್ದು ಹುಲಿಗೆಮ್ಮದೇವಿ ಪಾತ್ರ ನಿರ್ವಹಿಸಲಿದ್ದಾರೆ. ಈ ಚಿತ್ರ ತೆಲುಗು, ತಮಿಳು ಮತ್ತು ಮಲೆಯಾಳಿ ಭಾಷೆಗಳಲ್ಲಿ ಡಬ್ ಆಗಲಿದೆ’ ಎಂದು ತಿಳಿಸಿದರು.
ಪ್ರಿಯಾಂಕಾ ಉಪೇಂದ್ರ ಮಾತನಾಡಿ ‘ನಾನು ಮೊದಲಿನಿಂದಲೂ ದೇವಿಯ ಭಕ್ತೆ, ಭಕ್ತಿಪ್ರಧಾನ ಚಿತ್ರದಲ್ಲಿ ನಟಿಸುವ ಬಯಕೆ ಇತ್ತು. ಆ ಆಸೆ ಈಗ ಕೈಗೂಡಿದೆ’ ಎಂದು ಸಂತಸ ಹಂಚಿಕೊಂಡರು.
ಬಾಗಲಕೋಟೆಯ ಸಿದ್ದನಕೊಳ್ಳ ಡಾ. ಶಿವಕುಮಾರ ಸ್ವಾಮೀಜಿ, ಫಿಲ್ಮ್ ಚೇಂಬರ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಇದ್ದರು. ಬಿಜೆಪಿ ರಾಷ್ಟ್ರೀಯ ಯುವ ಕಾರ್ಯದರ್ಶಿ ಆರ್.ಎಸ್.ರಾಜು, ಪಾರಂಪರಿಕ ವೈದ್ಯ ಹನುಮಂತ ಮಳಲಿ, ಟಿ.ಜನಾರ್ದನ, ಹನುಮಂತಪ್ಪ ಹ್ಯಾಟಿ, ವಸಂತ ನಾಯಕ್, ಸಂಜೀವ, ಪ್ರಾಣೇಶ ಜನಾದ್ರಿ, ಹುಲುಗಪ್ಪ, ಮಂಜುಳಾ ಕರಡಿ, ಶೃತಿ ಹ್ಯಾಟಿ ಪಾಲ್ಗೊಂಡಿದ್ದರು.
ತಾರಾಗಣದಲ್ಲಿ ಭಾವನಾ, ಪ್ರೀತಿ, ಸುಮನ್, ರಾಜುತಾಳಿಕೋಟೆ, ಬಜರಂಗಿ ಪ್ರಸನ್ನ, ಸಂಜು ಬಸಯ್ಯ ಸೇರಿದಂತೆ ಅನೇಕರು ಅಭಿನಯಿಸಲಿದ್ದಾರೆ.
Laxmi News 24×7