ಹುಲಗಿ (ಕೊಪ್ಪಳ): ‘ಆಗಸ್ಟ್ 15ರ ಬಳಿಕ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆ. ನಾನು ನುಡಿದ ಭವಿಷ್ಯ ನಿಜವಾಗಲಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.
ಹುಲಗಿಯಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬರುತ್ತಾರೆ ಎಂದು ಹಿಂದೆ ಹೇಳಿದ್ದೆ.
ಆ ಕಾಲ ಈಗ ಸನ್ನಿಹಿತವಾಗಿದೆ’ ಎಂದರು.
‘ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಕಾರ್ಯಕ್ರಮದ ಬಳಿಕ ಕಾಂಗ್ರೆಸ್ ಮೂರು ಹೋಳಾಗಲಿದೆ ಎಂದು ಅನೇಕರು ಮಾತನಾಡಿದ್ದರು. ಆದರೆ, ಪಕ್ಷಕ್ಕೆ ಈಗ ಮೂರು ಪಟ್ಟು ಶಕ್ತಿ ಬಂದಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದೆ’ ಎಂದರು.
‘ಚುನಾವಣೆ ಹತ್ತಿರ ಬಂದಾಗ ಬಿಜೆಪಿ ನಾಯಕರು ಪರಿಶಿಷ್ಟ ಮುಖ್ಯಮಂತ್ರಿ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಗೆ ಪರಿಶಿಷ್ಟರ ಮತಗಳಷ್ಟೇ ಬೇಕು. ಚುನಾವಣೆ ಬಂದಾಗ ಈ ವಿಷಯ ತೇಲಿ ಬಿಟ್ಟು ಮತಬ್ಯಾಂಕ್ ರಾಜಕಾರಣ ಮಾಡುತ್ತದೆ’ ಎಂದು ಆರೋಪಿಸಿದರು.