ಬೀದರ್: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ನಗರದಲ್ಲಿರುವ ಬಹಮನಿ ಸುಲ್ತಾನರ ಕಾಲದ ಕೋಟೆ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದು, ತ್ರಿವರ್ಣ ಬೆಳಕಿನಲ್ಲಿ ಮೈದೆಳೆದ ಕೋಟೆ ವೀಕ್ಷಣೆಗೆ ಅನುಕೂಲವಾಗುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸ್ಮಾರಕಗಳ ವೀಕ್ಷಣೆ ಸಮಯವನ್ನು ರಾತ್ರಿ 9 ಗಂಟೆಯವರೆಗೂ ವಿಸ್ತರಿಸಿದೆ.
ಅಷ್ಟೇ ಅಲ್ಲ; ಐತಿಹಾಸಿಕ ಕೋಟೆ ಆವರಣದಲ್ಲಿ ರಾಷ್ಟ್ರ್ರ ಧ್ವಜ ಹಾರಿಸಲು ಸಿದ್ಧತೆ ನಡೆಸಿದೆ.
ಕೋಟೆಯೊಳಗಿನ ಗುಂಬಜ್ ದರ್ವಾಜಾ, ತರ್ಕಿಶ್ ಮಹಲ್ ಹಾಗೂ ಸೋಲಾ ಕಂಬಾ ಮಸೀದಿ ಸ್ಮಾರಕಗಳ ಮೇಲೆ ತ್ರಿವರ್ಣದ ಬೆಳಕು ಆವರಿಸುವಂತೆ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ಕೋಟೆ ಪ್ರವೇಶ ದ್ವಾರಕ್ಕೂ ಅಲಂಕಾರ ಮಾಡಲು ಪ್ರಾಯೋಗಿಕ ಪ್ರಯತ್ನ ಮುಂದುವರಿದಿದೆ. ಆಗಸ್ಟ್ 15ರ ವೇಳೆಗೆ ಈ ದೃಶ್ಯ ಕಣ್ಣಿಗೆ ಹಬ್ಬ ಉಂಟು ಮಾಡಲಿದೆ.
ನೂರು ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿದ ಪ್ರಯುಕ್ತ ಕೇಂದ್ರ ಸರ್ಕಾರದ ನಿರ್ದೇಶನದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ 2021ರ ಅಕ್ಟೋಬರ್ 16ರಂದು ಬೀದರ್ ಕೋಟೆಯೊಳಗಿನ ಸ್ಮಾರಕವನ್ನು ತ್ರಿವರ್ಣ ಧ್ವಜ ಹೋಲುವ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿತ್ತು. ಈಗ ಎರಡನೇ ಬಾರಿಗೆ ಕೋಟೆ ಸಿಂಗಾರಗೊಂಡಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಎಎಸ್‌ಐ ವ್ಯಾಪ್ತಿಯ ಎಲ್ಲ ಕೋಟೆಗಳ ಮೇಲೂ ರಾಷ್ಟ್ರ ಧ್ವಜ ಹಾರಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ ಕೋಟೆ ಆವರಣದೊಳಗೆ ಕ್ಯಾಂಟೀನ್ ಸಮೀಪ 50 ಮೀಟರ್ ಎತ್ತರದ ಧ್ವಜಕಂಬ ಅಳವಡಿಕೆಗೂ ಸಿದ್ಧತೆ ಮಾಡಲಾಗುತ್ತಿದೆ.