ಕೊಪ್ಪಳ: ರಾಜ್ಯಾದ್ಯಂತ ಇಂದು ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆ ನಡೆಯುತ್ತಿದೆ. ಕೊಪ್ಪಳದಲ್ಲಿ ಪರೀಕ್ಷೆ ಬರೆಯಲು ತುಂಬು ತೋಳಿನ ಅಂಗಿ ಹಾಕಿಕೊಂಡು ಬಂದವರಿಗೆ ಪರೀಕ್ಷಾ ಸಿಬ್ಬಂದಿ ತೋಳು ಕತ್ತರಿಸುವ ಮೂಲಕ ಶಾಕ್ ನೀಡಿದ್ದಾರೆ.
ಪಿಎಸ್‌ಐ ನೇಮಕಾತಿಯಲ್ಲಿನ ಅಕ್ರಮದಿಂದಾಗಿ ಇತರ ನೇಮಕಾತಿ ಪರೀಕ್ಷೆಗಳಿಗೆ ಕಟ್ಟುನಿಟ್ಟಿನ ಕಟ್ಟಳೆ ವಿಧಿಸಲಾಗಿದೆ. ಇಂದು ನಡೆಯುತ್ತಿರುವ ಪರೀಕ್ಷೆಗೆ ತುಂಬು ತೋಳಿನ ಅಂಗಿ ಹಾಕಿ ಬಂದವರನ್ನು ಪರೀಕ್ಷಾ ಕೇಂದ್ರದ ಒಳಗೆ ಬಿಟ್ಟಿಲ್ಲ. ಬೇರೆ ಶರ್ಟ್ ಧರಿಸಿ ಬರುವಂತೆ ಸೂಚಿಸಲಾಗಿದೆ.
ದೂರದೂರಿಂದ ಬಂದವರಿಗೆ ಬದಲಿ ಶರ್ಟ್ ಇಲ್ಲದಿದ್ದರೆ, ತೋಳು ಕತ್ತರಿಸಿಕೊಂಡು ಒಳಬರುವಂತೆ ತಿಳಿಸಿದ್ದಾರೆ. ಇಲ್ಲದಿದ್ದರೆ ಒಳ ಬಿಡುವುದಿಲ್ಲವೆಂದು ನಿಷೇಧ ಹೇರಿದ್ದಾರೆ. ಕೊಪ್ಪಳ ತಾಲೂಕಿನ ಭಾಗ್ಯನಗರದ ನವಚೇತನ ಪಬ್ಲಿಕ್ ಶಾಲೆ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ಅನಿವಾರ್ಯವಾಗಿ ಅಭ್ಯರ್ಥಿಗಳು ತೋಳು ಕತ್ತರಿಸಿಕೊಂಡು ಒಳ ಹೋಗಿದ್ದಾರೆ. ಕೆಲವರು ಬೇರೆ ಅಂಗ ಖರೀದಿಸಿ ಧರಿಸಿ ಪರೀಕ್ಷೆಗೆ ಹಾಜರಾಗಿದ್ದಾರೆ. ಜಿಲ್ಲಾದ್ಯಂತ 22 ಕೇಂದ್ರಗಳಲ್ಲಿ ಇಂದು ಪರೀಕ್ಷೆ ನಡೆಯುತ್ತಿವೆ.