ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಂಬತ್ತು ತಿಂಗಳುಗಳೇ ಕಳೆದುಹೋಗಿವೆ. ಅವರ ನಿಧನದ ನಂತರ ಅವರಿಗೆ ಕರ್ನಾಟಕ ರತ್ನ ಘೋಷಣೆ ಮಾಡಬೇಕು ಎಂಬ ಕೂಗು ಬಹಳವಾಗಿ ಕೇಳಿ ಬಂದಿತ್ತು. ಖುದ್ದು ಅಪ್ಪು ಕುಟುಂಬದ ಆತ್ಮೀಯರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದ್ದರು.
ಪ್ರಶಸ್ತಿ ಘೋಷಣೆಯಾಗಿ ಕೆಲ ತಿಂಗಳು ಕಳೆದಿದ್ದರೂ ಪ್ರಶಸ್ತಿ ಪ್ರದಾನವಾಗಿರಲಿಲ್ಲ. ಅದರ ದಿನಾಂಕವೂ ಘೋಷಣೆಯಾಗಿರಲಿಲ್ಲ. ಆದ್ದರಿಂದ ಅಪ್ಪು ಅಭಿಮಾನಿಗಳು ಈ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಅವರ ಕಾತರಕ್ಕೆ ಈಗ ತೆರೆ ಬಿದ್ದಿದೆ.
ಈ ಬಾರಿಯ ಕರ್ನಾಟಕ ರಾಜ್ಯೋತ್ಸವದ ದಿನ ಅಂದರೆ ನವೆಂಬರ್ 1ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.
ಬೆಂಗಳೂರಿನ ಲಾಲ್ಬಾಗ್ನಲ್ಲಿ ನಡೆಯುತ್ತಿರುವ ಫಲ ಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಬೊಮ್ಮಾಯಿ, ‘ಅಪ್ಪುಗೆ ಘೋಷಣೆ ಮಾಡಿರುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ನವೆಂಬರ್ 1 ರಂದು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಈ ಕಾರ್ಯಕ್ರಮದ ತಯಾರಿಗೆ ಸಮಿತಿಯನ್ನು ರಚನೆ ಮಾಡಿದ್ದೇವೆ. ಡಾ. ರಾಜ್‍ಕುಮಾರ್ ಕುಟುಂಬದ ಸದಸ್ಯರು ಈ ಸಮಿತಿಯಲ್ಲಿ ಇರುತ್ತಾರೆ ಎಂದು ಸಿಎಂ ಹೇಳಿದರು.