ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬವು ದಾವಣಗೆರೆಯಲ್ಲಿ ಅದ್ಧೂರಿಯಾಗಿ ನಿನ್ನೆ (ಬುಧವಾರ) ನಡೆದಿದೆ. ಲಕ್ಷ ಲಕ್ಷ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಹಾರೈಸಿದ್ದಾರೆ. ಕಾಂಗ್ರೆಸ್ನ ಬಹುತೇಕ ಎಲ್ಲಾ ನಾಯಕರೂ ಹುಟ್ಟುಹಬ್ಬದಂದು ದಾವಣಗೆರೆಯ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.
ಕಲಬುರಗಿಯ ಜಿಲ್ಲೆಯ ಅಫಜಲಪುರ ಶಾಸಕ ಎಂ.ವೈ. ಪಾಟೀಲ್ ಅವರು ಕೂಡ ದಾವಣಗೆರೆಗೆ ತೆರಳಿ ಅಲ್ಲಿ ಸಿದ್ದರಾಮಯ್ಯನವರಿಗೆ ಶುಭ ಹಾರೈಸಿದ್ದರು. ಅದೇ ಸಂತಸದಲ್ಲಿ ವಾಪಸ್ ಬಂದಿದ್ದ ಶಾಸಕ ಪಾಟೀಲ್ ಅವರು ಇಂದು ಬೆಳಗ್ಗೆ ಕಾಲು ಮುರಿದುಕೊಂಡಿದ್ದಾರೆ.
ಹುಬ್ಬಳ್ಳಿಯ ಸರ್ಕಿಟ್ ಹೌಸ್ನಲ್ಲಿ ಈ ದುರಂತ ನಡೆದಿದೆ. ಇಂದು ಬೆಳಗ್ಗೆ ಸ್ನಾನ ಮಾಡಲು ಹೋದಾಗ ಜಾರಿ ಬಿದ್ದು ಅವಘಡ ಸಂಭವಿಸಿದೆ. ಕೂಡಲೇ ಅವರ ಬೆಂಬಲಿಗರು ಆಸ್ಪತ್ರೆಗೆ ಶಾಸಕರನ್ನು ರವಾನೆ ಮಾಡಿದ್ದಾರೆ. ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದರೆ ಶಾಸಕರು ತೀವ್ರವಾದ ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.
ಸಿದ್ದರಾಮೋತ್ಸವದಲ್ಲಿ ಪಾಲ್ಗೊಂಡು ವಾಪಸ್ ಊರಿಗೆ ಹೊರಟಿದ್ದ ಶಾಸಕ ಪಾಟೀಲ್ ಅವರು ಹುಬ್ಬಳ್ಳಿಯಲ್ಲಿ ಉಳಿದುಕೊಂಡಿದ್ದರು. ಇಂದು ಸ್ನಾನ ಮುಗಿಸಿ ಅವರು ವಾಪಸ್ ಊರಿಗೆ ಹೋಗಬೇಕಿತ್ತು. ಆದರೆ ಈ ನಡುವೆಯೇ ಅವಘಡ ಸಂಭವಿಸಿದೆ.