ರಾಯಚೂರು: ರಾಜ್ಯ ಸರ್ಕಾರದಿಂದ ಹಿಂದೂ ಯುವಕರ ಹತ್ಯೆಗೆ ಮಾತ್ರವೇ ಪರಿಹಾರ ನೀಡಿ, ಮುಸ್ಲೀಂ ಯುವಕರ ಹತ್ಯೆಯಂತಹ ಸಂದರ್ಭದಲ್ಲಿ ಪರಿಹಾರವನ್ನು ವಿತರಿಸುತ್ತಿಲ್ಲ. ಆದ್ರೇ ಈ ತಾರತಮ್ಯ ಸರಿಯಲ್ಲ. ಯಾವುದೇ ತಾರತಮ್ಯ ಮಾಡದೇ ಹತ್ಯೆಯಂತ ಸಂದರ್ಭದಲ್ಲಿ ಪರಿಹಾರ ನೀಡುವಂತೆ ಮಂತ್ರಾಲಯದ ಶ್ರೀಗಳು ಹೇಳಿದ್ದಾರೆ.
ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ಪರಿಹಾರ ವಿಚಾರದಲ್ಲಿ ಯಾವುದೇ ತಾರತಮ್ಯ ಇರಬಾರದು. ಪ್ರಾಣ ಕಳೆದುಕೊಂಡವರೆಲ್ಲರೂ ಸಮಾನರು, ಎಲ್ಲಾ ಜೀವುಗಳು ಸಮಾನ. ಎಲ್ಲರಿಗೂ ಸೂಕ್ತ ರೀತಿಯಲ್ಲೇ ಪರಿಹಾರ ನೀಡಬೇಕು ಎಂಬುದಾಗಿ ಸರ್ಕಾರ ಕೋರಿತ್ತೇನೆ ಎಂದು ಹೇಳಿದರು.
ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಅನಾಹುತಕ್ಕೆ ಒಳಗಾದಂತ ಕುಟುಂಬದವರು ಕುಟುಂಬದ ಸದಸ್ಯನನ್ನು ಕಳೆದುಕೊಂಡು ನಿರ್ಗತಿಕರಾಗಬಾರದು ಎನ್ನುವಂತ ಕಾರಣದಿಂದಾಗಿ ಸರ್ಕಾರ ಪರಿಹಾರ ನೀಡುವಂತ ಕೆಲಸ ಮಾಡುತ್ತಿದೆ. ಆದ್ರೇ.. ಹತ್ಯೆಯಾದ ವ್ಯಕ್ತಿಯ ಕುಟುಂಬಕ್ಕೆ ಹಣ ನೀಡೋದು ಪರಿಹಾರವಲ್ಲ. ಹಣ ಮತ್ತು ಜೀವ ಎರಡನ್ನು ತುಲನೆ ಮಾಡಬೇಕು ಎಂದರು.
ಯಾವುದೇ ಸಮುದಾಯ, ವ್ಯಕ್ತಿ ಮತ್ತೊಂದು ಸಮುದಾಯದ ಮೇಲೆ ದಬ್ಬಾಳಿಕೆ, ಅತಿಕ್ರಮಣ, ಬೆದರಿಕೆ ಹಾಕೋದು ಸರಿಯಲ್ಲ. ಇಂತಹ ಘಟನೆಗೆ ಕಾರಣವಾಗುವವರನ್ನು, ಶಾಂತಿಗೆ ಭಂಗ ತರುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ತಿಳಿಸಿದರು.