ಬೆಳಗಾವಿ: ಸುಧಾರಣೆಯ ವಿಷಯದಲ್ಲಿ ದೇಶದಲ್ಲಿ 12ನೇ ಸ್ಥಾನಗಳಿಸಿ ಹೆಮ್ಮೆಯ ಸಾಧನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ಈಗ ವೈದ್ಯರ ನಿಯೋಜನೆ ವಿಷಯದಲ್ಲಿ ವಿವಾದಕ್ಕೆ ಗುರಿಯಾಗಿದೆ.
ತಾಲೂಕು ಆಸ್ಪತ್ರೆಗಳಲ್ಲಿರುವ ತಜ್ಞ ವೈದ್ಯರನ್ನು ಜಿಲ್ಲಾಸ್ಪತ್ರೆಗೆ ನಿಯೋಜನೆ ಮಾಡುತ್ತಿರುವುದು ಹೊಸ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದರೆ, ಆರೋಗ್ಯ ಇಲಾಖೆಯ ಈ ಕ್ರಮ ಸ್ಥಳೀಯ ಶಾಸಕರ ಕಂಗೆಣ್ಣಿಗೆ ಗುರಿಯಾಗಿದೆ. ಇದಕ್ಕೆ ಈಗ ಖಾನಾಪುರ ತಾಲೂಕು ಆಸ್ಪತ್ರೆ ಹೊಸ ಸೇರ್ಪಡೆಯಾಗಿದೆ.
ಮೊದಲೇ ತಾಲೂಕು ಆಸ್ಪತ್ರೆಗಳು ವೈದ್ಯರ ಕೊರತೆ ಎದುರಿಸುತ್ತಿವೆ. ಜಿಲ್ಲಾಮಟ್ಟದಲ್ಲಿ ನಡೆಯುವ ಸಭೆಗಳಲ್ಲಿ ಯಾವಾಗಲೂ ಇದು ಪ್ರಮುಖವಾಗಿ ಚರ್ಚೆಯಾಗುತ್ತಲೇ ಬಂದಿದೆ. ಸ್ಥಳೀಯ ಜನಪ್ರತಿನಿಧಿಗಳು ಈ ವಿಷಯದಲ್ಲಿ ಸದಾ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಗುರಿ ಮಾಡುತ್ತಲೇ ಬಂದಿದ್ದಾರೆ. ಹೀಗಿರುವಾಗ ತಾಲೂಕು ಆಸ್ಪತ್ರೆಯಲ್ಲಿರುವ ಒಬ್ಬರೋ ಇಬ್ಬರು ತಜ್ಞ ವೈದ್ಯರನ್ನು ಜಿಲ್ಲಾಸ್ಪತ್ರೆಗೆ ನಿಯೋಜನೆ ಮಾಡುವುದು ಎಷ್ಟು ಸರಿ ಎಂಬುದು ಶಾಸಕರ ಹಾಗೂ ಸಾರ್ವಜನಿಕರ ಪ್ರಶ್ನೆ.
ಜಿಲ್ಲೆಯಲ್ಲಿ ಒಟ್ಟು 92 ವೈದ್ಯರ ಕೊರತೆ ಇದೆ. ಅದರಲ್ಲಿ 42 ಜನ ತಜ್ಞ ವೈದ್ಯರು ಇಲ್ಲ. 17 ಎಂಬಿಬಿಎಸ್ ವೈದ್ಯರ ಕೊರತೆ ಇದೆ. ಇದರ ಮಧ್ಯೆ ಕಳೆದ ನಾಲ್ಕೈದು ತಿಂಗಳ ಅವಧಿಯಲ್ಲಿ ವಿವಿಧ ತಾಲೂಕು ಆಸ್ಪತ್ರೆಗಳಿಂದ ಆರು ಜನ ವೈದ್ಯರು ಮತ್ತು ಐದು ಜನ ಸಿಬ್ಬಂದಿಗಳನ್ನು ಬಿಮ್ಸ್‌ಗೆ ನಿಯೋಜನೆ ಮಾಡಲಾಗಿದೆ. ರಾಮದುರ್ಗ ತಾಲೂಕಿನ ಬುದನೂರಿನ ಆರೋಗ್ಯ ಕೇಂದ್ರದ ಸಿಬ್ಬಂದಿಯನ್ನು ಬೆಳಗಾವಿಗೆ ವರ್ಗ ಮಾಡಿರುವ ಕಾರಣ ಅಲ್ಲಿ ಉಳಿದ ಸಿಬ್ಬಂದಿ ವೇತನ ಬಟವಾಡೆ ಪ್ರಕ್ರಿಯೆಗೆ ತೊಂದರೆಯಾಗಿದೆ ಎಂಬುದು ಜಿಲ್ಲಾ ಆರೋಗ್ಯಾಧಿಕಾರಿಗಳ ಹೇಳಿಕೆ.
ವೈದ್ಯರ ನಿಯೋಜನೆ ವಿಷಯ ಕಳೆದ ಕೆಡಿಪಿ ಸಭೆಯಲ್ಲಿ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿತ್ತು. ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವಿರುದ್ಧ ಹರಿಹಾಯ್ದಿದ್ದರು. ಈಗ ಅದೇ ರೀತಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.