ಹಾವೇರಿ: ಅಗ್ನಿಪಥ ಸೇನಾ ನೇಮಕಾತಿ ಯೋಜನೆಯಡಿ ಸೆಪ್ಟೆಂಬರ್ 1ರಿಂದ 20ರವರೆಗೆ ಹಾವೇರಿ ನಗರದಲ್ಲಿ ಅಗ್ನಿವೀರರ ನೇಮಕಾತಿ ರ‍್ಯಾಲಿ ಆಯೋಜಿಸಲಾಗಿದ್ದು, ನೇಮಕಾತಿ ರ‍್ಯಾಲಿಗೆ ಅಗತ್ಯವಾದ ಮೂಲಸೌಕರ್ಯಗಳ ಸಿದ್ಧತೆಗೆ ವಿವಿಧ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಅಗ್ನಿಪಥ ನೇಮಕಾತಿ ರ‍್ಯಾಲಿ ಪೂರ್ವ ಸಿದ್ಧತೆ ಕುರಿತಂತೆ ಸೇನಾ ನೇಮಕಾತಿ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿವೀರರ ನೇಮಕಾತಿ ಕುರಿತಂತೆ ಆಯ್ಕೆ ಪ್ರಕ್ರಿಯೆ ಕೈಗೊಳ್ಳಲು ಸ್ಥಳ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ವಸತಿ ವ್ಯವಸ್ಥೆ, ಸ್ವಚ್ಛತಾ ವ್ಯವಸ್ಥೆ, ತಾತ್ಕಾಲಿಕ ವಸತಿ ವ್ಯವಸ್ಥೆ, ಸೇನಾ ನೇಮಕಾತಿಗೆ ಅನುಗುಣವಾಗಿ ಜಿಲ್ಲಾ ಕ್ರೀಡಾಂಗಣ ಸಿದ್ಧಗೊಳಿಸುವ ಕಾರ್ಯವನ್ನು ಸ್ಥಳೀಯ ಅಧಿಕಾರಿಗಳು ಕೈಗೊಳ್ಳಬೇಕಾಗಿರುವುದರಿಂದ ನೇಮಕಾತಿ ಪ್ರಾಧಿಕಾರದ ಅಧಿಕಾರಿಗಳ ಅವಶ್ಯ ಹಾಗೂ ಮಾರ್ಗದರ್ಶನದಂತೆ ವ್ಯವಸ್ಥೆ ಮಾಡಬೇಕು. ಯಾವುದೇ ಲೋಪವಾಗಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದರು.
ವಸತಿ-ಊಟದ ವ್ಯವಸ್ಥೆ
ಸೇನಾ ನೇಮಕಾತಿ ಅಧಿಕಾರಿಗಳ ತಂಡಕ್ಕೆ ಖಾಸಗಿ ಹೋಟೆಲ್‍ಗಳಲ್ಲಿ ವಸತಿ ವ್ಯವಸ್ಥೆ ಮಾಡಬೇಕು. ಸೇನಾ ನೇಮಕಾತಿ ಸಿಬ್ಬಂದಿಗೆ ನಗರದ ಉತ್ತಮ ವಿದ್ಯಾರ್ಥಿ ನಿಲಯದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು. ವಿವಿಧ ಜಿಲ್ಲೆಗಳಿಂದ ಹಾವೇರಿಗೆ ಆಗಮಿಸುವ ಅಭ್ಯರ್ಥಿಗಳಿಗೆ ತಾತ್ಕಾಲಿಕ ವ್ಯವಸ್ಥೆಯಾಗಿ ನಗರದ ವಿವಿಧ ಸಮುದಾಯ ಭವನಗಳನ್ನು ಗುರುತಿಸಿ ವ್ಯವಸ್ಥೆ ಮಾಡಬೇಕು. ಅಭ್ಯರ್ಥಿಗಳಿಗೆ ಊಟದ ವ್ಯವಸ್ಥೆಗಾಗಿ ಫುಡ್ ಕೋರ್ಟ್‍ಗಳನ್ನು ಗುರುತಿಸಿ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಸೇನಾ ನೇಮಕಾತಿ ಅಧಿಕಾರಿಗಳು ನೀಡುವ ನೀಲನಕ್ಷೆಯಂತೆ ಕ್ರೀಡಾಂಗಣದಲ್ಲಿ ನೇಮಕಾತಿ ಪ್ರಕ್ರಿಯೆಗೆ ವ್ಯವಸ್ಥೆ ಮಾಡಬೇಕು ಎಂದರು.
’50 ಸಾವಿರ ಅಭ್ಯರ್ಥಿಗಳ ನಿರೀಕ್ಷೆ’
ಅಗ್ನಿಪಥ ನೇಮಕಾತಿ ವಿಭಾಗದ ಅಧಿಕಾರಿ ಸುನೀಲಕುಮಾರ ಮಾತನಾಡಿ, 50 ರಿಂದ 60ಸಾವಿರ ಅಭ್ಯರ್ಥಿಗಳು ಅಗ್ನಿವೀರರ ನೇಮಕಾತಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ದಿನಕ್ಕೆ 2500 ರಿಂದ 3000 ಅಭ್ಯರ್ಥಿಗಳ ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ದಾಖಲೆಗಳ ಪರಿಶೀಲನೆ ಸಹ ನಡೆಸಲಾಗುವುದು ಎಂದರು.
‘ಸಾರಿಗೆ ಸೌಲಭ್ಯ ಕಲ್ಪಿಸಿ’