ಬೆಂಗಳೂರು: ಮಾಹಿತಿ ತಂತ್ರಜ್ಞಾನದ ದಿಗ್ಗಜ ಇನ್ಫೋಸಿಸ್ ಸಂಸ್ಥೆ ಹುಬ್ಬಳ್ಳಿಯಲ್ಲಿ ತೆರೆಯಬೇಕು ಎನ್ನುವ ಹಲವರ ಕನಸು ಕೊನೆಗೂ ನನಸಾಗಿದೆ. ಇದೇ ಆಗಸ್ಟ್ 1ರಿಂದ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಇನ್ಫೋಸಿಸ್ ಶುರು ಮಾಡಬೇಕು ಎಂದು ದಶಕದಿಂದಲೇ ಕೂಗು ಕೇಳಿಬಂದಿತ್ತು.
ಈ ಭಾಗದ ಯುವ ಜನತೆಗೆ ಉದ್ಯೋಗಾವಕಾಶಗಳು ತೆಗೆದುಕೊಳ್ಳಲಿವೆ ಎಂಬ ಭರವಸೆಯಿಂದ ಇನ್ಫೋಸಿಸ್ ಕಾರ್ಯಾರಂಭಕ್ಕೆ ಒತ್ತಡ ಹೆಚ್ಚಿತ್ತು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಸುಸಜ್ಜಿತವಾದ, ಬೃಹದಾಕಾರದ ಇನ್ಫೋಸಿಸ್ ಕ್ಯಾಂಪಸ್ ಕಾರ್ಯಾರಂಭ ಮಾಡಿರಲಿಲ್ಲ. ಇದೇ ಕಾರಣಕ್ಕೆ ನೂತನ ರೀತಿಯಲ್ಲಿ ಅಭಿಯಾನವನ್ನು ಕೈಗೊಂಡಿದ್ದ ಕೆಲ ಯುವ ತಂಡವು ‘ಸ್ಟಾರ್ಟ್ ಇನ್ಫೋಸಿಸ್’ ಎನ್ನುವ ತಂಡ ಕಟ್ಟಿಕೊಂಡು ಮುಖ್ಯಮಂತ್ರಿಯವರಿಗೆ 10 ಸಾವಿರ ಪತ್ರ ಅಭಿಯಾನಕ್ಕೆ ಚಾಲನೆ ನೀಡಿದ್ದರು.
ಕೆಎಲ್‌ಇ ಸಂಸ್ಥೆಯ ಸಿ.ಐ. ಮುನವಳ್ಳಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು. ನಂತರ ವಿದ್ಯಾರ್ಥಿಗಳು ಹಾಗೂ ಬೋಧಕರ ಸಭೆಯಲ್ಲಿ ಇನ್ಫೋಸಿಸ್ ಕ್ಯಾಂಪಸ್ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ವಿದ್ಯಾರ್ಥಿಗಳು ಬರೆದ 500ಕ್ಕೂ ಹೆಚ್ಚು ಮನವಿ ಪತ್ರಗಳನ್ನು ಸಂಗ್ರಹಿಸಲಾಗಿತ್ತು.
ಇವೆಲ್ಲವುಗಳ ಫಲಶ್ರುತಿಯಾಗಿ ಇದೀಗ ಇನ್ಫೋಸಿಸ್ ಸಂಸ್ಥೆ ಆಗಸ್ಟ್ 1ರಂದು ಕಾರ್ಯಾರಂಭ ಮಾಡಲು ರೆಡಿಯಾಗಿದ್ದು, ಉತ್ತರ ಕರ್ನಾಟಕದ ಭಾಗದ ಯುವ ಸಮುದಾಯದಲ್ಲಿ ಭಾರಿ ಸಂತಸವನ್ನು ತಂದಿದೆ.
ಈ ಕುರಿತು ಮಾಹಿತಿ ನೀಡಿರುವ ಇನ್ಫೋಸಿಸ್, ಉತ್ತರ ಕರ್ನಾಟಕದ ಭಾಗದ ಜನರ ಆಸೆಯಂತೆ ಇಲ್ಲಿ ಕಚೇರಿ ಪ್ರಾರಂಭಿಸುತ್ತಿದ್ದೇವೆ. ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಸಂಸ್ಥೆಯಲ್ಲಿ ನೀಡಲಾಗಿದೆ. ಇದಾಗಲೇ ಹಲವಾರು ಯುವಕ-ಯುವತಿಯರು ನಮ್ಮನ್ನು ಭೇಟಿ ಮಾಡಿದ್ದು, ಉದ್ಯೋಗಕ್ಕೆ ಹಾತೊರೆದಿದ್ದಾರೆ. ದೀರ್ಘಾವಧಿ ಹಾಗೂ ಅಲ್ಪಾವಧಿ ಉದ್ಯೋಗಕ್ಕೆ ಅವರು ಸಮ್ಮತಿಯನ್ನು ಸೂಚಿಸಿದ್ದಾರೆ ಎಂದು ತಿಳಿಸಿದೆ.