ಬೆಳಗಾವಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಡಿಸಿ ಕಚೇರಿ ಸುತ್ತಲೂ ವಿವಿಧ ಅಭಿವೃದ್ಧಿ ಮಾಡಲು ಡಿಸಿ ನಿತೇಶ ಪಾಟೀಲ್ ದೃಢವಾದ ಹೆಜ್ಜೆ ಇಟ್ಟಿದ್ದಾರೆ.
ಹೌದು ರಾಜ್ಯದ ಎರಡನೇ ರಾಜಧಾನಿ ಎಂದು ಕರೆಸಿಕೊಳ್ಳುವ ಬೆಳಗಾವಿಯ ಡಿಸಿ ಕಚೇರಿಗೆ ವಿವಿಧ ತಾಲೂಕುಗಳ ಗ್ರಾಮಗಳಿಂದ ದಿನನಿತ್ಯ ಸಾವಿರಾರು ಜನರು ಬರುತ್ತಾರೆ. ಅನೇಕ ಜಿಲ್ಲಾಧಿಕಾರಿಗಳು ಬೆಳಗಾವಿಗೆ ಬಂದು ಹೋಗಿದ್ದಾರೆ. ಆದರೆ ನಿತೇಶ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡ ತಕ್ಷಣವೇ ತಮ್ಮ ಕಚೇರಿ ಸುತ್ತಮುತ್ತಲಿನ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸುವ ಕೆಲಸ ಮಾಡಿದರು. ಇನ್ನು ಎಸಿ ಕಚೇರಿ ಮುಂಭಾಗದ ಖುಲ್ಲಾ ಜಾಗವನ್ನು ಪ್ರತಿಭಟನೆಗೆ ಮೀಸಲು ಇಡುವ ಗುರಿ ಇಟ್ಟುಕೊಂಡಿದ್ದಾರೆ.
ಯಾಕೆಂದರೆ ಸಾವಿರಾರು ಜನರು ಬಿಸಿಲು, ಮಳೆ, ಚಳಿಗಾಲದಲ್ಲಿಯೇ ಡಿಸಿ ಕಚೇರಿ ಮುಂದೆ ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಹೀಗಾಗಿ ಪ್ರತಿಭಟನಾಕಾರರಿಗೆ ಅನುಕೂಲ ಆಗುವ ದೃಷ್ಟಿಯಿಂದ ಉತ್ತಮ ಗುಣಮಟ್ಟದ ಪ್ರತಿಭಟನಾ ವೇದಿಕೆ ನಿರ್ಮಿಸಲು ಜಿಲ್ಲಾಧಿಕಾರಿಗಳು ಮುಂದಾಗಿದ್ದಾರೆ.
ಗುರುವಾರ ಸ್ಮಾರ್ಟ ಸಿಟಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ನಿತೇಶ್ ಪಾಟೀಲ್ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ಪ್ರವೇಶದ್ವಾರದಲ್ಲಿ ಇರುವ ಬ್ಯಾರಿಕೇಡ್‍ಗಳನ್ನು ತೆರವುಗೊಳಿಸಿ ಒಂದು ಸುಂದರವಾದ ಕಮಾನ್ ನಿರ್ಮಾಣ ಮಾಡುವ ಚಿಂತನೆ ಮಾಡಲಾಗಿದೆ.
ಇದರ ಜೊತೆಗೆ ಇನ್ನು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಒಂದು ಮಾದರಿ ಜಿಲ್ಲಾಧಿಕಾರಿ ಕಚೇರಿ ಆವರಣ ಮಾಡುವ ನಿಟ್ಟಿನಲ್ಲಿ ಬರುವ ಎರಡು ದಿನಗಳಲ್ಲಿ ನೀಲನಕ್ಷೆ ಸಿದ್ಧಪಡಿಸುತ್ತೇವೆ ಎಂದು ಭರವಸೆ ನೀಡಿದರು.