ಹುಬ್ಬಳ್ಳಿ: ಕೆಲವು ದಿನಗಳಿಂದ ಕಡಿಮೆಯಾಗಿದ್ದ ಮಳೆ ಬುಧವಾರ ಸಾಯಂಕಾಲ ನಗರದಲ್ಲಿ ಏಕಾಏಕಿ ರಭಸವಾಗಿ ಸುರಿಯಿತು.
ಅಬ್ಬರದ ಮಳೆಗೆ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದ ಪಕ್ಕದಲ್ಲಿರುವ ಶ್ರೇಯಾ ಜ್ಯುಪಿಟರ್ ಕಾಂಪ್ಲೆಕ್ಸ್‌ನ ತಡೆಗೋಡೆ ಕುಸಿದು ಕಲಬುರ್ಗಿ ಮೂಲದ, ಇಲ್ಲಿನ ಬೆಂಗೇರಿ ನಿವಾಸಿ ದರ್ಶನ್(16) ಮೃತಪಟ್ಟಿದ್ದಾರೆ.
ಮಾರುಕಟ್ಟೆ ಪ್ರದೇಶ ಸೇರಿದಂತೆ, ಕೆಲವು ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿದೆ. ಹೊಸೂರು ವೃತ್ತ, ಹೊಸೂರು ಬಿಆರ್‌ಟಿಎಸ್ ಬಸ್ ನಿಲ್ದಾಣ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನೀರು
ನಿಂತಿತ್ತು.
ಸಿಡಿಲು ಬಡಿದು ಯುವತಿಗೆ ಗಾಯ
ಉತ್ತರ ಕನ್ನಡದ ಹಳಿಯಾಳ, ಸಿದ್ದಾಪುರ, ಭಟ್ಕಳ ತಾಲ್ಲೂಕುಗಳ ಕೆಲವೆಡೆ ಸಂಜೆ ಮಳೆಯಾಗಿದೆ. ಸಿದ್ದಾಪುರ ತಾಲ್ಲೂಕಿನ ಹೇಮಗಾರ ಗ್ರಾಮದಲ್ಲಿ ಸಿಡಿಲು ಬಡಿದು ಜ್ಯೋತಿ ಅಣ್ಣಪ್ಪ ನಾಯ್ಕ (20) ಎಂಬುವವರು ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗಕ್ಕೆ ಕರೆದುಕೊಂಡು
ಹೋಗಲಾಗಿದೆ.
ಹಳಿಯಾಳದಲ್ಲಿ ಅರ್ಧ ಗಂಟೆಗೂ ಹೆಚ್ಚು ಜೋರಾಗಿ ಮಳೆಯಾದ ಬಗ್ಗೆ ವರದಿಯಾಗಿದೆ.
ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ದಂಪತಿ ಶವ ಪತ್ತೆ
ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಜಟ್ಟೂರು ಗ್ರಾಮದ ಬಳಿ ಕಾಗಿಣಾ ನದಿಯ ಪ್ರವಾಹದಲ್ಲಿ ಮಂಗಳವಾರ ಮಧ್ಯಾಹ್ನ ಕೊಚ್ಚಿ ಹೋಗಿದ್ದ ತೆಲಂಗಾಣದ ಮಂತಟ್ಟಿ ಗ್ರಾಮದ ಬುಗ್ಗಪ್ಪ ನರಸಪ್ಪ (60) ಮತ್ತು ಯಾದಮ್ಮ ಬುಗ್ಗಪ್ಪ (55) ದಂಪತಿ ಶವಗಳು ಬುಧವಾರ ಬೆಳಿಗ್ಗೆ ಪತ್ತೆಯಾಗಿವೆ.