ಕೋಮು ಭಾವನೆ ಕದಡುವ ಶಕ್ತಿಗಳನ್ನು ಸದೆಬಡಿಯುತ್ತೇವೆ. ಬಾಯಿ ಮಾತಿನಲ್ಲಿ ಅಲ್ಲ ಕಠಿಣ ಕ್ರಮಕೈಗೊಂಡಿದ್ದೇವೆ. ರಾಜ್ಯದಲ್ಲಿ ಅಪರಾಧಗಳ ತಡೆಗೆ ಹಲವು ಕ್ರಮಕೈಗೊಂಡಿದ್ದೇವೆ. ಅಗತ್ಯ ಬಿದ್ದರೆ ರಾಜ್ಯದಲ್ಲೂ ಯೋಗಿ ಮಾಡೆಲ್ ಜಾರಿ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ ಜನೋತ್ಸವ ಸಮಾವೇಶ ಕಾರ್ಯಕ್ರಮವನ್ನು ಎಲ್ಲರ ಜೊತೆ ಚರ್ಚಿಸಿ ರದ್ದುಗೊಳಿಸಿದ್ದೇವೆ ಎಂದರು. ರಾಜ್ಯ ಬಿಜೆಪಿ ಸರ್ಕಾರ ಮೂರು ವರ್ಷ ಪೂರೈಸಿದೆ. ಸರ್ಕಾರದ ಸಾಧನೆ ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ. ಸರ್ಕಾರ ನಡೆಸಲು ಅವಕಾಶ ಕೊಟ್ಟ ವರಿಷ್ಠರಿಗೆ ಧನ್ಯವಾದ ಹೇಳಿದರು.
ನಮ್ಮ ಸಚಿವ ಸಂಪುಟದಲ್ಲಿ ಅತ್ಯಂತ ದಕ್ಷ ಆಡಳಿತಗಾರ ಇದ್ದಾರೆ. ಸೇವಾ ಮನೋಭಾವ ಚೈತನ್ಯ ಇರುವ ಯುವಕರು ಬದ್ದತೆ ಇರುವ ಸಂಪುಟ ನಮ್ಮದು. ಇವರೆಲ್ಲರ ಪಾಲು ನಮ್ಮ ಸರ್ಕಾರದ ಸಾಧನೆಯಲ್ಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಸ್ವಲ್ಪ ನಿಯಂತ್ರಣಕ್ಕೆ ಬಂದ ಮೇಲೆ ನಾನು ಅಧಿಕಾರ ವಹಿಸಿಕೊಂಡೆ.
ಯಡಿಯೂರಪ್ಪ ಸಮರ್ಥವಾಗಿ ಕೋವಿಡ್ ನಿರ್ವಹಿಸಿದ್ದರು. ಯಾರು ಯಾರು ಆಯಾ ಕ್ಷೇತ್ರದಲ್ಲಿ ಪರಿಣತರೋ ಎಲ್ಲ ಅಧಿಕಾರಿಗಳು ಸಚಿವರು ಸಹಕಾರ ನೀಡಿದರು. ಆಡಳಿತ ಯಾರ ಪರವಾಗಿ ಇದೆ ಎನ್ನೋದು ಬಹಳ ಮುಖ್ಯ. ರಾಜ್ಯದ ಸಮಗ್ರ ಅಭಿವೃದ್ಧಿ ಆಡಳಿತ ನಾವು ನೀಡಿದ್ದೇವೆ. ಮಾಧ್ಯಮ ಸ್ನೇಹಿತರು ಒಳ್ಳೆಯ ಕೆಲಸ ಮಾಡಿದಾಗ ಪ್ರಚಾರ ಕೊಟ್ಟಿದ್ದೀರಿ. ರೈತರ ವಿದ್ಯಾನಿಧಿ ಪ್ರಥಮ ಬಾರಿ ಇಡೀ ದೇಶದಲ್ಲಿ ಮಾಡಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.