ಹುಬ್ಬಳ್ಳಿ: ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸದ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಮಾಹಿತಿ ನೀಡುವಂತೆ ತಾಕೀತು ಮಾಡಿದರು.
ಇಲ್ಲಿನ ಮಿನಿವಿಧಾನಸೌಧದ ತಾಪಂ ಸಭಾಭವನದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ತ್ತೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈಗಾಗಲೇ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವಾರು ಕಟ್ಟಡಗಳ ಕಾಮಗಾರಿ ಅರ್ಧಕ್ಕೆ ಮಾಡಲಾಗಿದೆ ಎಂದರಲ್ಲದೆ, ಕಾಮಗಾರಿಗಳ ಕುರಿತು ಮಾಹಿತಿ ನೀಡುವಂತೆ ಅಧಿಕಾರಿಗೆ ಸೂಚಿಸಿದರು.
ಒಟ್ಟು 55 ಕಾಮಗಾರಿಯಲ್ಲಿ 44 ಕಾಮಗಾರಿಗಳು ಮುಕ್ತಾಯಗೊಂಡಿದ್ದು, ಇನ್ನುಳಿದವುಗಳನ್ನು ಬೇಗ ಮುಕ್ತಾಯಗೊಳಿಸುತ್ತೇವೆಂದು ಅಧಿಕಾರಿ ಹೇಳುತ್ತಿದ್ದಂತೆಯೇ ಆಕ್ರೋಶಗೊಂಡ ಸಚಿವರು, ಇಲಾಖೆ ನೀಡಿರುವ ಕಾಲಮಿತಿ ಎಷ್ಟೆಂದು ಮಾಹಿತಿ ಕೇಳಿದಾಗ ಅದಕ್ಕುತ್ತರಿಸಲು ತಡವರಿಸಿದ ಅಧಿಕಾರಿ ಬೇಗನೆ ಮುಗಿಸುತ್ತೇವೆ, ಬೇಗನೆ ಮುಗಿಸಿಕೊಡುತ್ತೇವೆ ಎಂದು ಹೇಳಲು ಮುಂದಾದರು. ಗ್ರಾಮೀಣ ಬಿಇಒ ಅಶೋಕಕುಮಾರ ಸಿಂದಗಿ ಅವರು ಕಾಮಗಾರಿ ಪೂರ್ಣಗೊಳಿಸಲು 8 ತಿಂಗಳಗೂ ಹೆಚ್ಚು ಕಾಲಾವಕಾಶ ನೀಡಲಾಗಿದೆ ಎಂದರು. ಕೆಡಿಪಿ ಸದಸ್ಯ ಮಾತನಾಡಿ, ನಿರ್ಮಿತಿ ಕೇಂದ್ರದ ಕಾಮಗಾರಿಯಲ್ಲಿ ಗುಣಮಟ್ಟ ಸರಿಯಾಗಿಲ್ಲ. ಶಾಲೆಗಳಿಗೆ ಅಳವಡಿಸಿರುವ ಬಾಗಿಲುಗಳು ತುಂಬಾ ಕಳಪೆ ಮಟ್ಟದ್ದಾಗಿವೆ ಎಂದರು.
ಇದರಿಂದ ಇನ್ನಷ್ಟು ಆಕ್ರೋಶಗೊಂಡ ಸಚಿವರು, ಇನ್ಮುಂದೆ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ನೀಡದಂತೆ ಸೂಚನೆ ನೀಡುತ್ತೇನೆ, ಈಗಿರುವ ಕಾಮಗಾರಿ ಕೂಡಲೇ ಮುಕ್ತಾಯಗೊಳಿಸಿ ಕೊಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡ ಕಾಮಗಾರಿಗಳನ್ನು ಈಗಾಗಲೇ ಮಾಡಲಾಗುತ್ತಿದ್ದು, ಇನ್ನುಳಿದವುಗಳನ್ನು ಮಳೆ ನೋಡಿಕೊಂಡು ಮಾಡಲಾಗುವುದು ಎಂದರು.