Breaking News

ಒಬಿಸಿಗೆ ಶೇ.33 ಮೀಸಲಾತಿ

Spread the love

ಬೆಂಗಳೂರು: ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ) ಗಳಿಗೆ ಶೇ. 33ರಷ್ಟು ರಾಜಕೀಯ ಮೀಸಲಾತಿ ನೀಡುವಂತೆ ನ್ಯಾ| ಭಕ್ತವತ್ಸಲ ಸಮಿತಿಯು ತನ್ನ ವರದಿಯಲ್ಲಿ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ.

ಸಮಿತಿಯು ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವರದಿ ಸಲ್ಲಿಸಿದೆ.

ಬಿಬಿಎಂಪಿ, ಜಿಲ್ಲಾ ಮತ್ತು ತಾ.ಪಂ. ಚುನಾವಣೆ ನಡೆಸಲು ಆಯೋಗದ ವರದಿ ನಿರ್ಣಾಯಕವಾಗಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾಕರನ್ನು ಒಳಗೊಂಡಂತೆ ಇತರ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇ. 44.40ರಷ್ಟಿದೆ. ಈ ಸಮುದಾಯಗಳಿಗೆ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಲಾಗುತ್ತಿದ್ದರೂ ಸಾಮಾಜಿಕ ಮತ್ತು ರಾಜಕೀಯವಾಗಿ ಅವು ಹಿಂದುಳಿದಿವೆ. ಮುಸ್ಲಿಮರ ಸಹಿತ ಇತರ ಹಿಂದುಳಿದ ವರ್ಗಗಳಿಗೆ ಕರ್ನಾಟಕದಲ್ಲಿ ಬಿಬಿಎಂಪಿ ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 33ರಷ್ಟು ರಾಜಕೀಯ ಮೀಸಲಾತಿ ಕಲ್ಪಿಸಬಹುದು.

ಆದರೆ ಎಸ್ಸಿ -ಎಸ್ಟಿ ಸೇರಿದಂತೆ ಮೀಸಲಾತಿ ಪ್ರಮಾಣ ಶೇ. 50ರಷ್ಟು ಮೀರದಂತೆ ನೋಡಿಕೊಳ್ಳಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.

ರಾಜ್ಯದಲ್ಲಿ ಮುಸ್ಲಿಮರನ್ನು ಹೊರತುಪಡಿಸಿ ಇತರ ಅಲ್ಪಸಂಖ್ಯಾಕ ಸಮುದಾಯಗಳು ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ಪಡೆಯಲು ಸಾಧ್ಯವಾಗಿಲ್ಲ.

ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಯ ಪ್ರವರ್ಗ 2(ಬಿ) ವ್ಯಾಪ್ತಿಯಲ್ಲಿ ಮುಸ್ಲಿಂ ಸಮುದಾಯ ಒಂದೇ ಬರುತ್ತದೆ. ಅದು ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ-ಎ ವ್ಯಾಪ್ತಿಯಲ್ಲಿದ್ದು, 1996, 2001, 2010 ಮತ್ತು 2015ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗಿದೆ ಎನ್ನುವುದನ್ನು ಆಯೋಗ ಗಮನಿಸಿದೆ.

ಮೇಯರ್‌ ಅವಧಿ 30 ತಿಂಗಳುಗಳಿಗೆ ಹೆಚ್ಚಿಸಿ :

ಹೊಸ ಬಿಬಿಎಂಪಿ ಕಾಯ್ದೆಯ ಪ್ರಕಾರ ಮೇಯರ್‌ ಮತ್ತು ಉಪ ಮೇಯರ್‌ ಸ್ಥಾನಗಳಿಗೆ ಒಬಿಸಿ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಲು ಪರಿಗಣಿಸಬೇಕು. ಅಲ್ಲದೆ 1976ರ ಕೆಎಂಸಿ ಕಾಯ್ದೆಯ ಸೆಕ್ಷನ್‌ 10ಕ್ಕೆ ತಿದ್ದುಪಡಿ ತಂದು ಬಿಬಿಎಂಪಿಯಲ್ಲಿ 30 ತಿಂಗಳುಗಳಿಗೆ ಅವಕಾಶ ಕಲ್ಪಿಸಿದಂತೆ ಇತರ ನಗರ ಸ್ಥಳೀಯ ಸಂಸ್ಥೆಗಳ ಮೇಯರ್‌ ಮತ್ತು ಉಪ ಮೇಯರ್‌ಗಳ ಅವಧಿಯನ್ನೂ 30 ತಿಂಗಳುಗಳಿಗೆ ನಿಗದಿ ಪಡಿಸಬೇಕು ಎಂದು ಸಲಹೆ ನೀಡಿದೆ.

ಅಲ್ಲದೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳನ್ನು ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಯ ಚುನಾವಣ ವಿಭಾಗದ ವ್ಯಾಪ್ತಿಗೆ ತರುವಂತೆ ಶಿಫಾರಸು ಮಾಡಲಾಗಿದೆ.

2027 ಅಥವಾ 2028ರಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಸರಕಾರವು ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಮರು ಪರಿಶೀಲನೆ ಮಾಡುವಂತೆ ಆಯೋಗವು ಸಲಹೆ ನೀಡಿದೆ.

ಸಂಪುಟದಲ್ಲಿ ಚರ್ಚೆ ಸಾಧ್ಯತೆ :

ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನ್ಯಾ| ಭಕ್ತವತ್ಸಲ ಸಮಿತಿಯ ವರದಿ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ವರದಿ ಸಲ್ಲಿಕೆಯಾಗಿರುವ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿ, ವರದಿಯು ಸರಕಾರದ ಪರಿಶೀಲನೆಯಲ್ಲಿದೆ ಎಂದು ಅರಿಕೆ ಮಾಡಿಕೊಳ್ಳುವ ಮೂಲಕ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಇನ್ನಷ್ಟು ಸಮಯ ಕೇಳುವ ಸಾಧ್ಯತೆಯೂ ಇದೆ.

ಶಿಫಾರಸುಗಳೇನು? :

1.ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಇತರ ಒಬಿಸಿಗೆ ಶೇ. 33 ಪ್ರಾತಿನಿಧ್ಯ ನೀಡಿ

2.ಬಿಬಿಎಂಪಿಯಲ್ಲಿ ಮೀಸಲಾತಿ ನೀಡುವಾಗ ಒಬಿಸಿಯವರನ್ನೂ ಗಮನಿಸಿ

3.ಎಲ್ಲ ಸ್ಥಳೀಯ ಸಂಸ್ಥೆಗಳನ್ನು ಆಡಳಿತ ಮತ್ತು ಸುಧಾರಣ ಇಲಾಖೆ ವ್ಯಾಪ್ತಿಗೆ ತನ್ನಿ

4.ಮೇಯರ್‌, ಉಪಮೇಯರ್‌ ಅವಧಿ ಬದ ಲಾವಣೆಗಾಗಿ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತನ್ನಿ

ಪುನರ್‌ ವಿಂಗಡಣೆ ವರದಿ ಮತ್ತು ನ್ಯಾ| ಭಕ್ತವತ್ಸಲ ಸಮಿತಿ ವರದಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗುತ್ತದೆ. ಅಲ್ಲಿನ ನಿರ್ದೇಶನದಂತೆ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. –ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ


Spread the love

About Laxminews 24x7

Check Also

ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ! 6 ಬಾರಿ ತಲಾಖ್, ಅಬಾರ್ಷನ್

Spread the loveಬೆಂಗಳೂರು, ಜುಲೈ 1: ಗಂಡನಾದವನೇ ಹೆಂಡತಿಯನ್ನು ಬೇರೆಯವರ ಜತೆ ಮಲಗುವಂತೆ ಪೀಡಿಸಿದರೆ, ಅದಕ್ಕಾಗಿ ಹಿಂಸಿಸಿದರೆ ಮಹಿಳೆಯ ಸ್ಥಿತಿ ಹೇಗಾಗಬಹುದು! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ