ಅಸ್ಸಾಂ,ಜುಲೈ.6- ಸೇತುವೆ ನಿರ್ಮಾಣಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನಲೆಯಲ್ಲಿ ಇಲ್ಲಿನ ಗ್ರಾಮಸ್ಥರು ಸರ್ಕಾರದ ನೆರವಿಲ್ಲದೆ 10 ಲಕ್ಷ ರೂ. ವೆಚ್ಚದಲ್ಲಿ 250 ಮೀಟರ್ ಉದ್ದದ ಬಂಬೂ ಬ್ರಿಡ್ಜು ನಿರ್ಮಿಸಿದ್ದಾರೆ.
ಬರ್ಪೆಟ್ ಜಿಲ್ಲೆಯ ಕಚುಮರ ಪ್ರದೇಶದ ಸುತ್ತಮುತ್ತಲ ಹತ್ತು ಹಳ್ಳಿಗಳ ಗ್ರಾಮಸ್ಥರು ತಮ್ಮ ಸ್ವಂತ ಹಣದಲ್ಲಿ ಸೇತುವೆ ನಿರ್ಮಿಸಿಕೊಂಡಿದ್ದು, ಬ್ರಹ್ಮಪುತ್ರ ಉಪನದಿಯಿಂದ ಕಚುಮಾರ ಬಜರ್‍ಗೆ ಸಂಪರ್ಕ ಕಲ್ಪಿಸುವ 250 ಮೀಟರ್ ಉದ್ದದ ಸೇತುವೆಯನ್ನು ಕಟ್ಟಿಕೊಂಡಿದ್ದಾರೆ
ಸೇತುವೆ ಇಲ್ಲದೆ ನಮಗೆ ತುಂಬಾ ತೊಂದರೆಯಾಗಿತ್ತು, ಮಕ್ಕಳು ಶಾಲೆಗೆ ನದಿ ದಾಟಿಯೇ ಹೋಗಬೇಕಿತ್ತು. ಪ್ರತಿನಿತ್ಯ ಓಡಾಟಕ್ಕೆ ದೇಶೀಯ ಬೋಟ್ ಬಳಸುವುದು ಅಪಾಯಕಾರಿಯೇ. ಮುಂಗಾರು ಸಮಯದಲ್ಲಂತೂ ನದಿ ದಾಟುವುದು ದುಸ್ಸಾಹಸವೇ ಆಗಿತ್ತು.
ಹಾಗಾಗಿ ಸೇತುವೆ ನಿರ್ಮಾಣ ಅಗತ್ಯವಾಗಿದ್ದರಿಂದ ನಾವೇ ಖುದ್ದು ನಿರ್ಮಿಸಿಕೊಂಡೆವು ಎಂದು ಸ್ಥಳೀಯರು ಹೇಳಿದ್ದಾರೆ. ಸೇತುವೆ ನಿರ್ಮಿಸಿಕೊಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಲ್ಲಿ, ಶಾಸಕರಿಗೆ ಮನವಿ ಮಾಡಿದ್ದೆವು. ಸರಕಾರಕ್ಕೂ ಅರ್ಜಿ ಸಲ್ಲಿಸಿ ಸುಮಾರು ವರ್ಷಗಳೇ ಕಳೆದವು ಯಾವ ಪ್ರಯೋಜನವೂ ಆಗಲಿಲ್ಲ.
ಕೊನೆಗೆ ಗ್ರಾಮಸ್ಥರೆಲ್ಲ ಸೇರಿ ಸೇತುವೆ ನಿರ್ಮಿಸಲು ನಿರ್ಧರಿಸಿ ಅದರಂತೆ ಇಲ್ಲಿನ ಯುವಕರೂ ಸೇತುವೆ ನಿರ್ಮಾಣಕ್ಕೆ ಪ್ರತಿ ಕುಟುಂಬದಿಂದ ಚಂದ ವಸೂಲಿ ಮಾಡಿ, ಇನ್ನಿತರ ವಸ್ತುಗಳನ್ನು ಸಂಗ್ರಹಿಸಿ ಸಹಕರಿಸಿದರು ಎಂದು ಹೇಳಿದ್ದಾರೆ.
ಈ ಸೇತುವೆ ಸದ್ಯಕ್ಕೆ ಉಪಯೋಗವಾಗುತ್ತದೆ ತಾತ್ಕಾಲಿಕವಾಗಿ. ಶಾಶ್ವತವಾದ ಸೇತುವೆ ನಿಮಾರ್ಣಕ್ಕೆ ಮತ್ತೊಮ್ಮೆ ಸರಕಾರಕ್ಕೆ ಮನವಿ ಮಾಡುವುದಾಗಿ ಸ್ಥಳೀಯ ಯುವಕರು ತಿಳಿಸಿದ್ದಾರೆ