Breaking News

ನ್ಯಾ.ಸಂದೇಶ್ ವಿರುದ್ಧ ಸುಪ್ರೀಂ ಮೊರೆ ಹೋದ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್

Spread the love

ಬೆಂಗಳೂರು,ಜು.11. ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಲಂಚ ಪ್ರಕರಣದಲ್ಲಿ ನ್ಯಾ.ಎಚ್.ಪಿ. ಸಂದೇಶ್ ಭ್ರಷ್ಟಾಚಾರ ನಿಗ್ರಹ ದಳದ ವಿರುದ್ಧ ಹಾಗೂ ತಮ್ಮ ವಿರುದ್ಧ ಭಾರಿ ಟೀಕೆ ಮಾಡಿರುವುದನ್ನು ಪ್ರಶ್ನಿಸಿ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

 

ಇದರೊಂದಿಗೆ ನ್ಯಾ.ಸಂದೇಶ್ ಮತ್ತು ಸೀಮಂತ್ ಕುಮಾರ್ ಸಿಂಗ್ ಅವರ ನಡುವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅವರು ನ್ಯಾ. ಸಂದೇಶ್ ವಿರುದ್ಧ ಸಲ್ಲಿಸಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್ ಇನ್ನೂ ವಿಚಾರಣೆಗೆ ಸ್ವೀಕರಿಸಿಲ್ಲ.

ಹಾಗಾಗಿ ಸೀಮಂತ್ ಕುಮಾರ್ ಸಿಂಗ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆ ಅರ್ಜಿಯ ತುರ್ತು ವಿಚಾರಣೆಗೆ ಸೋಮವಾರ ಬೆಳಗ್ಗೆ ಸಿಜೆಐ ಎನ್.ಎ. ರಮಣ ಅವರಿದ್ದ ನ್ಯಾಯಪೀಠದ ಎದುರು ಮನವಿ ಮಾಡಲಾಯಿತು.

ಆಗ ಸಿಜೆ, ನ್ಯಾಯಮೂರ್ತಿ ತಮಗೆ ವರ್ಗಾವಣೆ ಬೆದರಿಕೆ ಇದೆ ಎಂದು ಹೇಳಿದ್ದಾರಲ್ಲಾ ಇದು ಅದೇ ಪ್ರಕರಣವೇನು? ಆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ ಅಲ್ವವೇ ಎಂದು ಕೇಳಿದರು. ಆಗ ಅರ್ಜಿದಾರರ ಪರ ವಕೀಲರು, ಹೌದು ಅದೇ ಪ್ರಕರಣ. ಆದರೆ, ಇದರಲ್ಲಿ ಎಸಿಬಿಯ ಪಾತ್ರವೇನೂ ಇಲ್ಲ ಎಂದು ಉತ್ತರಿಸಿದರು. ಅದಕ್ಕೆ ಸಿಜೆ, ಸರಿ ಹಾಗಿದ್ದರೆ ಮಂಗಳವಾರ ಅರ್ಜಿ ವಿಚಾರಣೆ ನಡೆಸೋಣ ಎಂದು ಮುಂದೂಡಿದರು.

ಸೀಮಂತ್ ಕುಮಾರ್ ಸಿಂಗ್ ತಮ್ಮ ಅರ್ಜಿಯಲ್ಲಿ ನ್ಯಾ.ಸಂದೇಶ್ ತಮ್ಮ ವ್ಯಾಪ್ತಿ ಮೀರಿ ಆದೇಶ ಮಾಡಿದ್ದಾರೆ. ಹಾಗಾಗಿ ಅದಕ್ಕೆ ತಡೆ ನೀಡಬೇಕೆಂದು ಕೋರಿದ್ದಾರೆ.

ಸಿಂಗ್ ವಿರುದ್ಧ ವಾಗ್ದಾಳಿ:

ಲಂಚ ಪ್ರಕರಣದಲ್ಲಿ ಜಾಮೀನು ಕೋರಿದ ಉಪ ತಹಶೀಲ್ದಾರ್ ಮಹೇಶ್ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯಪೀಠ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿತ್ತು, ಅವರೇ ಕಳಂಕಿತರು ಅವರು ಹೇಗೆ ಸಂಸ್ಥೆಯನ್ನು ಮುನ್ನಡೆಸಲು ಸಾಧ್ಯ ಎಂದು ಪ್ರಶ್ನಿಸಿ, ಸೀಮಂತ್ ಕುಮಾರ್ ಸೇವಾ ದಾಖಲೆ ಸಲ್ಲಿಸಲು ಆದೇಶಿಸಿದ್ದರು.

ಹೈಕೋರ್ಟ್ ಏನು ಹೇಳಿತ್ತು?

ನ್ಯಾಯಮೂರ್ತಿ ಕಳದ ವಿಚಾರಣೆ ವೇಳೆ,ಎಸಿಬಿಯಲ್ಲಿನ ಅಕ್ರಮಗಳ ಪ್ರಶ್ನಿಸಿರುವುದಕ್ಕೆ ನನಗೆ ವರ್ಗಾವಣೆಯ ಬೆದರಿಕೆ ಬಂದಿದೆ. ಈ ಹಿಂದೆ ನ್ಯಾಯಾಧೀಶರೊಬ್ಬರನ್ನು ವರ್ಗಾಯಿಸಲಾಗಿದೆ ಎಂದು ಹೇಳುವ ಮೂಲಕ ನನಗೇ ವರ್ಗಾವಣೆಯ ಬೆದರಿಕೆ ಹಾಕಲಾಗಿದೆ. ಎಸಿಬಿಯ ಎಡಿಜಿಪಿ ಪವರ್ ಫುಲ್ ಅಂತೆ. ವ್ಯಕ್ತಿಯೊಬ್ಬ ನೀಡಿದ ಮಾಹಿತಿ ಆಧರಿಸಿ ಹೈಕೋರ್ಟ್‌ನ ನನ್ನ ಸಹೋದ್ಯೋಗಿ ನ್ಯಾಯಮೂರ್ತಿಗಳೇ ನನಗೆ ವರ್ಗಾವಣೆಯ ಬೆದರಿಕೆಯಿದೆ ಎಂದು ತಿಳಿಸಿದ್ದಾರೆ. ವರ್ಗಾವಣೆ ಮಾಡಿಸುವ ಬೆದರಿಕೆಯನ್ನೂ ಆದೇಶದಲ್ಲಿ ಬರೆಸುತ್ತೇನೆ. ಜನರ ಒಳಿತಾಗಿ ವರ್ಗಾವಣೆ ಬೆದರಿಕೆ ಎದುರಿಸಲು ಸಿದ್ಧನಿದ್ದೇನೆ ಎಂದರು.

ಅಲ್ಲದೆ, ನನಗೆ ಯಾರ ಹೆದರಿಕೆಯೂ ಇಲ್ಲ. ಬೆಕ್ಕಿಗೆ ಗಂಟೆ ಕಟ್ಟಲು ಸಿದ್ಧನಿದ್ದೇನೆ. ನ್ಯಾಯಮೂರ್ತಿಯಾದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ನ್ಯಾಯಮೂರ್ತಿ ಹುದ್ದೆ ಹೋದರೂ ಚಿಂತೆ ಮಾಡುವುದಿಲ್ಲ. ನಾನು ರೈತನ ಮಗ. ಉಳುಮೆ ಮಾಡಿ ಜೀವನ ಸಾಗಿಸಲೂ ಸಿದ್ಧನಿದ್ದೇನೆ. 50 ರುಪಾಯಿಯಲ್ಲಿ ಜೀವನ ನಡೆಸುವುದು ಗೊತ್ತು; 50 ಸಾವಿರ ಹಣದಲ್ಲೂ ಜೀವನ ನಡೆಸುವುದು ಗೊತ್ತಿದೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿಲ್ಲ. ಸಂವಿಧಾನ ಮಾತ್ರ ಬದ್ಧನೇ ಹೊರತು ಯಾವುದೇ ಪಕ್ಷದ ಸಿದ್ಧಾಂತಕ್ಕೂ ಬದ್ಧನಲ್ಲ ಎಂದು ನುಡಿದರು.

ಯಾರನ್ನುರಕ್ಷಿಸುತ್ತಿದೆ?

ಎಸಿಬಿಯು ಯಾರನ್ನು ರಕ್ಷಣೆ ಮಾಡುತ್ತಿದೆ. ಸಾರ್ವಜನಿಕರನ್ನು ರಕ್ಷಿಸುತ್ತಿದೆಯೇ ಅಥವಾ ಕಳಂಕಿತರನ್ನು ರಕ್ಷಿಸುತ್ತಿದೆಯೇ? ಭ್ರಷ್ಟಾಚಾರದಲ್ಲಿ ಇಡೀ ರಾಜ್ಯವೇ ಹತ್ತಿ ಉರಿಯುತ್ತಿರುವಾಗ ಎಸಿಬಿ ಏನು ಮಾಡುತ್ತಿದೆ. ಬಿ ರಿಪೋರ್ಟ್ ಮಾಹಿತಿ ಬಹಿರಂಗಪಡಿಸಲು ಹಿಂಜರಿಕೆ ಏಕೆ ಎಂದು ಪ್ರಶ್ನಿಸಿತಲ್ಲದೆ, ಎಸಿಬಿ ಎಡಿಜಿಪಿ ವಿವರ ಸರ್ವಿಸ್ ರೆಕಾರ್ಡ್ ನೀಡಲು ಆದೇಶಿಸಿತ್ತು.

ಸಿಬಿಐ ಎಸ್ ಪಿ ಹಾಜರಿಗೆ ಸೂಚನೆ:

ಬಳ್ಳಾರಿಯಲ್ಲಿ ಗಣಿಗಾರಿಕೆ ಪ್ರಕರಣ ನಡೆದಾಗ ಹಾಲಿ ಎಸಿಬಿ ಎಡಿಜಿಪಿ ಆಗಿರುವ ಸೀಮಂತ್ ಕುಮಾರ್ ಸಿಂಗ್ ಅಲ್ಲಿನ ಡಿಸಿಯಾಗಿದ್ದರು. ಅವರ ಮೇಲೂ ಗಣಿ ಕಪ್ಪ ಪಡೆದ ಆರೋಪ ಎದುರಾಗಿತ್ತು. ಹಾಗಾಗಿ ಆ ಕುರಿತ ತನಿಖೆ ಎಲ್ಲಿಯವರೆಗೆ ಬಂದಿದೆ ಎಂ ಬಗ್ಗೆ ವಿವರ ನೀಡಲು ಸಿಬಿಐ ಎಸ್ ಪಿ ಮುಂದಿನ ವಿಚಾರಣೆ ವೇಳೆಗೆ ಹಾಜರಿರಬೇಕು ಎಂದು ನಿರ್ದೇಶನ ನೀಡಿತು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ