ಬೆಂಗಳೂರು: ‘ಪಿಎಸ್‌ಐ ನೇಮಕ ಅಕ್ರಮದಲ್ಲಿ ಬಿಜೆಪಿ ಪ್ರಮುಖರು,ಪ್ರಭಾವಿ ಸಚಿವರು, ನಾಯಕರು ಭಾಗಿಯಾಗಿದ್ದು, ಅವರ ಹೆಸರು ಬಹಿರಂಗಪಡಿಸಬೇಕು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ರಾಜ್ಯ ಕಾಂಗ್ರೆಸ್ ನಾಯಕರು ಹೋರಾಟ ತೀವ್ರಗೊಳಿಸಿದ್ದಾರೆ.
ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಗುರುವಾರ ಪ್ರತಿಭಟನೆ ನಡೆಸಿದ ‘ಕೈ’ ನಾಯಕರು, ‘ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ’, ‘ರಕ್ಷಿಸಿ, ರಕ್ಷಿಸಿ ನ್ಯಾಯಾಧೀಶರನ್ನು ರಕ್ಷಿಸಿ’ ಎಂದು ಘೋಷಣೆ ಕೂಗಿದರು.
‘ಮುಖ್ಯಮಂತ್ರಿ ಕಚೇರಿಯಿಂದ ಹಿಡಿದು ಗೃಹ ಸಚಿವಾಲಯ, ಪೊಲೀಸ್ ಅಧಿಕಾರಿಗಳ ಕಚೇರಿಗಳ ಪ್ರತಿನಿಧಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ಬಂಧಿತರಿಂದ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 164ರ (ತಪ್ಪೊಪ್ಪಿಗೆ ಮತ್ತು ಹೇಳಿಕೆಗಳ ದಾಖಲು) ಅಡಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.
‘ಕ್ಯಾಮೆರಾಗಳನ್ನು ಬಂದ್ ಮಾಡಿ ರಹಸ್ಯವಾಗಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಯಾರು ಯಾವ ಅಧಿಕಾರಿಗಳನ್ನು ಯಾವ ಕಚೇರಿಯಲ್ಲಿ, ಹೊಟೇಲ್‌ನಲ್ಲಿ ಭೇಟಿಯಾಗಿದ್ದರು ಎನ್ನುವುದು ಗೊತ್ತಿದೆ. ಅಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿಯನ್ನು ಯಾವ ಸಚಿವರು ವಿಚಾರಣೆಯಿಂದ ರಕ್ಷಿಸಿದರು, 20-25 ದಿನಗಳ ಬಳಿಕ ಅದೇ ಸಚಿವರು ಆ ಅಭ್ಯರ್ಥಿಗೆ ಹಣ ಹಿಂದಿರುಗಿಸಲಾಗುವುದು ಎಂದು ಹೇಳಿ ಶರಣಾಗತಿ ಮಾಡಿಸಿದ್ದರು ಎನ್ನುವುದೂ ಗೊತ್ತು’ ಎಂದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಈ ಹಗರಣದ ಕಿಂಗ್ ಪಿನ್‌ಗಳು ಹೊರಗಡೆ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಅಮ್ರಿತ್ ಪೌಲ್ ಅವರನ್ನು ಬಂಧಿಸಿದ ನಂತರ ವಿಚಾರಣೆಗೆ ಒಳಪಡಿಸದೇ ಇರುವುದು ಅತಿ ದೊಡ್ಡ ಲೋಪ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಈ ಹಗರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ನ್ಯಾಯಾಂಗ ತನಿಖೆಗೆ ಒಪ್ಪಿಸುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದರು.
ಕಾಂಗ್ರೆಸ್ ಮುಖಂಡರಾದ ಕಾಗೋಡು ತಿಮ್ಮಪ್ಪ, ಪಿ.ಎಂ. ನರೇಂದ್ರಸ್ವಾಮಿ, ವಿ.ಎಸ್. ಉಗ್ರಪ್ಪ, ಪ್ರಕಾಶ್ ರಾಥೋಡ್, ನಾರಾಯಣಸ್ವಾಮಿ, ನಾಗರಾಜ್ ಯಾದವ್ ಇದ್ದರು.