ಕಲಬುರಗಿ, ಜುಲೈ 7: ಪಿಎಸ್‌ಐ ಅಕ್ರಮ ನೇಮಕಾತಿ ವಿಚಾರದಲ್ಲಿ ಎಡಿಜಿಪಿ ಅಮೃತ್ ಪಾಲ್ ಬಂಧನದ ನಂತರ, ವಿರೋಧ ಪಕ್ಷವಾದ ಕಾಂಗ್ರೆಸ್ ಆಡಳಿತ ಪಕ್ಷದ ವಿರುದ್ದ ವಾಗ್ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಕಾಂಗ್ರೆಸ್ ನಾಯಕರು ಸತತ ಸುದ್ದಿಗೋಷ್ಠಿ ನಡೆಸಿ ಮಾಹಿತಿಯನ್ನು ಹೊರಹಾಕುತ್ತಿದ್ದಾರೆ.
ಈ ಭ್ರಷ್ಟಾಚಾರದಲ್ಲಿ ಸರಿಯಾದ ತನಿಖೆ ನಡೆದರೆ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ ಎಂದಿದ್ದ ಕಾಂಗ್ರೆಸ್ ನಾಯಕ ಮತ್ತು ಚಿತ್ತಾಪುರ ಕ್ಷೇತ್ರದ ಶಾಸಕರೂ ಆಗಿರುವ ಪ್ರಿಯಾಂಕ್ ಖರ್ಗೆ, ಪರೋಕ್ಷವಾಗಿ ಈ ಅಕ್ರಮದ ಹಿಂದಿನ ಕಿಂಗ್ ಪಿನ್ ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಎಂದು ಬೊಟ್ಟು ಮಾಡಿದ್ದಾರೆ.
ಈ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಆರೋಪ/ಪ್ರತ್ಯಾರೋಪವನ್ನು ಮಾಡುತ್ತಿದ್ದಾರೆ. ಇವೆಲ್ಲದರ ನಡುವೆ, ಅಮೃತ್ ಪಾಲ್ ಬರೀ ಹೆಸರು ಮಾತ್ರ, ಅಸಲಿ ಹೆಸರು ಬೇರೆಯೇ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಿಐಡಿಯ ಪ್ರತ್ಯೇಕ ತಂಡಗಳು ಅಮೃತ್ ಪಾಲ್ ಅವರ ನಿವಾಸ ಮತ್ತು ಫಾರಂಹೌಸಿನಲ್ಲಿ ಶೋಧವನ್ನು ಮುಂದುವರಿಸಿವೆ. ಕೆಲವೊಂದು ದಾಖಲೆಗಳು ಲಭ್ಯವಾಗಿವೆ ಎಂದು ಹೇಳಲಾಗುತ್ತಿದ್ದು, ಈ ಹಗರಣದ ಹಿಂದಿನ ಕಿಂಗ್ ಪಿನ್ ಹಿಂದಿನ ಗೃಹಸಚಿವರು ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
Laxmi News 24×7