ಬೆಂಗಳೂರು, ಜು.7. ಬೆಂಗಳೂರು ನಗರ ಜಿಲ್ಲಾಧಿಕಾರಿಯಿಂದ ಲಂಚಕ್ಕೆ ಬೇಡಿಕೆ ಪ್ರಕರಣದಲ್ಲಿ ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ಹೈಕೋರ್ಟ್ ಏಕಸದಸ್ಯಪೀಠ ಮತ್ತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಾರ್ಯನಿರ್ವಹಣೆ ಬಗ್ಗೆ ಮತ್ತೆ ಕಿಡಿಕಾರಿದೆ.
ಅಲ್ಲದೆ, ನ್ಯಾಯಾಲಯದ ಹಿಂದಿನ ಆದೇಶದಂತೆ ಸರ್ಚ್ ವಾರೆಂಟ್ ಜಾರಿ ಮತ್ತು ಸಲ್ಲಿಕೆಯಾಗಿರುವ ಬಿ ರಿಪೋರ್ಟ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿದೆ.
ಎಸಿಬಿ ಪ್ರಕರಣದ ಮಾಹಿತಿಯನ್ನು ಮುಚ್ಚಿಡುತ್ತಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಎಷ್ಟು ಪ್ರಕರಣಗಳಲ್ಲಿ ಎಸಿಬಿ ನ್ಯಾಯಾಲಯಗಳಿಗೆ ಬಿ ರಿಪೋರ್ಟ್ ಗಳನ್ನು ಸಲ್ಲಿಸಿದೆ ಎಂಬ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವಂತೆ ರಿಜಿಸ್ಟ್ರಾರ್ ಜುಡಿಷಿಯಲ್ ರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಪ್ರಕರಣದಲ್ಲಿ ಉಪ ತಹಸೀಲ್ದಾರ್ ಮಹೇಶ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾ.ಎಚ್.ಪಿ. ಸಂದೇಶ್ ಗುರುವಾರ ಎಸಿಬಿ ವಿರುದ್ಧ ಹರಿಹಾಯ್ದರು.
ಕೋರ್ಟ್ ಆದೇಶದ ನಂತರವೇ ಬಂಧನ:
ಹೈಕೋರ್ಟ್ ವಿಚಾರಣೆ ನಂತರವಷ್ಟೇ ಬೆಂಗಳೂರು ನಗರ ಡಿಸಿ ಮಂಜುನಾಥ್ ಅವರನ್ನು ಬಂಧಿಸಲಾಗಿದೆ, ಅವರ ಮೇಲೆ ಮೊದಲೇ ಸ್ಪಷ್ಟ ಸಾಕ್ಷ್ಯವಿದ್ದರೂ ಅವರನ್ನು ರಕ್ಷಿಸುವ ಯತ್ನ ನಡೆಸಿತು. ಕೋರ್ಟ್ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಮೇಲೆ ಡಿಸಿಗೆ ಎಸಿಬಿ ನೋಟಿಸ್ ನೀಡಿದರೂ ಅದೂ ಅವರನ್ನು ರಕ್ಷಿಸುವ ಯತ್ನವೇ ಆಗಿತ್ತು ಎಂದು ನ್ಯಾಯಾಲಯ ಕಿಡಿ ಕಾರಿತು.
ಎಸಿಬಿ ಎಡಿಜಿಪಿ ಈ ವಿಚಾರದಲ್ಲಿ ಸಂಸ್ಥೆಯ ಘನತೆ ಉಳಿಸುವ ಬದಲು, ಐಎಎಸ್ ಅಧಿಕಾರಿಯನ್ನು ರಕ್ಷಿಸಲು ಮುಂದಾದರು, ಅವರು ಆತ್ಮಸಾಕ್ಷಿ ಮುಟ್ಟಿಕೊಂಡು ಇಲ್ಲ ಎಂದು ಹೇಳಲಿ ನೋಡೋಣ ಎಂದು ನ್ಯಾಯಪೀಠ ಪ್ರಶ್ನಿಸಿದರು.
99 ಬಿ ರಿಪೋರ್ಟ್ ಸಲ್ಲಿಕೆ:
ವಿಚಾರಣೆ ಅರಂಭವಾಗುತ್ತಿದ್ದಂತೆಯೇ ಎಸಿಬಿ ಪರ ವಕೀಲರು, ನ್ಯಾಯಾಲಯದ ನಿರ್ದೇಶನದಂತೆ ಬಿ ರಿಪೋರ್ಟ್ ಹಾಗೂ ಸಚ್ ವಾರೆಂಟ್ ಗಳ ಮಾಹಿತಿ ಸಲ್ಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.