ಮುಂಬೈ: ಕಳೆದೊಂದು ವಾರದಿಂದ ಭರ್ಜರಿ ಪ್ರರ್ದಶನ ಕಾಣುತ್ತಿದ್ದ ಮಹಾ ರಾಜಕೀಯ ನಾಟಕ ಕೊನೆಗೂ ಅಂತ್ಯವಾಗಿದೆ. ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ಬಣದ ಬಂಡಾಯದ ಸಮರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನವಾಗಿದೆ.. ಹೀಗಾಗಿ ಮುಂದೆ ಮಹಾ ಸಿಂಹಾಸನದಲ್ಲಿ ಕುಳಿತು ಅಧಿಕಾರ ನಡೆಸೋರು ಯಾರು ಅನ್ನೋ ಲೆಕ್ಕಾಚಾರ ಶುರುವಾಗಿದೆ.
ವಿಶ್ವಾಸ ಯುದ್ಧಕ್ಕೂ ಮುನ್ನವೇ ಸಿಎಂ ಉದ್ಧವ್ ಠಾಕ್ರೆ ಶಸ್ತ್ರತ್ಯಾಗ ಮಾಡಿ, ಮಹಾ ಸಿಂಹಾಸನದಿಂದ ಕೆಳಗಿಳಿದಿದ್ದಾರೆ. ಠಾಕ್ರೆ ರಾಜೀನಾಮೆ ಘೋಷಿಸುತ್ತಿದ್ದಂತೆ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್, ಪಕ್ಷದ ರಾಜ್ಯಾಧ್ಯಕ್ಷ ಚಂದ್ರಕಾಂತ ಪಾಟೀಲ್, ಇತರೆ ನಾಯಕರು ಸಿಹಿ ಹಂಚಿ ಸಂಭ್ರಮಿಸಿದ್ರು. ಬಳಿಕ ಎಲ್ಲ ನಾಯಕರು ಮುಂದಿನ ಸಿಎಂ ಫಡ್ನವೀಸ್ ಎಂದು ಘೋಷಣೆ ಕೂಗಿದರು. ಸರ್ಕಾರ ಪತನವಾಗುವ ಸುಳಿವನ್ನು ಮೊದಲೇ ಅರಿತಿದ್ದ ಬಿಜೆಪಿ, ತಡರಾತ್ರಿಯೇ ಶಾಸಕಾಂಗ ಸಭೆ ನಡೆಸಿತು. ಈ ಸಂದರ್ಭದಲ್ಲಿ ಮುಂದಿನ ನಡೆಗಳ ಬಗ್ಗೆ ಚರ್ಚಿಸಲಾಗಿದೆ.
ಜುಲೈ 1ಕ್ಕೆ ಬಿಜೆಪಿ ನೇತೃತ್ವದ ನೂತನ ಸರ್ಕಾರ ಸ್ಥಾಪನೆ?
ಕಬ್ಬಿಣ ಕಾದಿರುವಾಗಲೇ ಬಗ್ಗಿಸಬೇಕು.. ಸ್ವಲ್ಪ ತಡವಾದ್ರು ಯಡವಟ್ಟಾಗಬಹುದು. ಇದನ್ನು ಚೆನ್ನಾಗಿಯೇ ಅರಿತಿರುವ ಬಿಜೆಪಿ ನಾಯಕರು ಇವತ್ತೇ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ರಾಜ್ಯಪಾಲರ ಬಳಿಗೆ ತೆರಳಿ ಸರ್ಕಾರ ರಚನೆ ಮಾಡುವ ಹಕ್ಕು ಮಂಡಿಸುವ ಸಾಧ್ಯತೆ ದಟ್ಟವಾಗಿದೆ. ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ ಇಂದು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆ ಇದ್ದು, ರಾಜ್ಯಪಾಲರು ಒಪ್ಪಿಗೆ ನೀಡಿದ್ರೆ ಇವತ್ತು ಅಥವಾ ನಾಳೆ ಸರ್ಕಾರ ರಚನೆ ಮಾಡುವ ಸಾಧ್ಯತೆ ಇದೆ.
Laxmi News 24×7