ಬೆಳಗಾವಿ: ‘ವಾಯವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರು ತಮ್ಮ ಹಿಂಬಾಲಕರ ಮೂಲಕ ಮತದಾರರಿಗೆ ಹಣ ಹಂಚಿದ್ದಾರೆ. ಅವರ ಮೇಲೆ ಕ್ರಮ ವಹಿಸಬೇಕು, ಪ್ರಸಕ್ತ ಚುನಾವಣೆಯಿಂದ ಅವರನ್ನು ವಜಾ ಮಾಡಬೇಕು’ ಎಂದು ಶಾಸಕ ಅಭಯ ಪಾಟೀಲ ಆಗ್ರಹಿಸಿದ್ದಾರೆ.
‘ಭಾನುವಾರ ವಿಜಯಪುರ ನಗರದಲ್ಲಿ ಸುಮಾರು ₹ 17.40 ಲಕ್ಷ ಹಣದ ಜೊತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಅಭ್ಯರ್ಥಿಯ ಕರಪತ್ರಗಳು ಸಿಕ್ಕಿವೆ. ಬೆಳಗಾವಿಯ ಗ್ರಾಮೀಣ ಪ್ರದೇಶದಲ್ಲಿ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಊಹೆ ಮಾಡಲಾಗದಷ್ಟು ಹಣ ನೀಡಿದ್ದಾರೆ. ಚುನಾವಣಾ ಅಧಿಕಾರಿಗಳು ಹಾಗೂ ಚುನಾವಣಾ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಾರಕವಾಗಿದೆ’ ಎಂದು ಹೇಳಿದ್ದಾರೆ.
‘ಕಾಂಗ್ರೆಸ್ ನಾಯಕರಿಗೆ ಸೇರಿದ ‘ರವದಿ ಫಾರ್ಮ್ ಹೌಸ್’ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಹಣ ಹಂಚಲು ಸೇರಿದಂತೆ ಅನೇಕ ಅಕ್ರಮ ನಡೆದಿರುವ ವಿಡಿಯೊಗಳು ವೈರಲ್ ಆಗಿವೆ. ಈ ಬಗ್ಗೆ ಚುನಾವಣಾ ಆಯೋಗ ಕೂಡಲೇ ಕ್ರಮ ಜರುಗಿಸಬೇಕು. ಶಿಕ್ಷಕರ ಕ್ಷೇತ್ರ ಅತ್ಯಂತ ಪವಿತ್ರವಾದದ್ದು, ಕಾಂಗ್ರೆಸ್ ಪಕ್ಷವು ಅಕ್ರಮವಾಗಿ, ಆಸೆ-ಆಮಿಷಗಳ ಮೂಲಕ ಗೆಲ್ಲಲು ಹವಣಿಸುತ್ತಿರುವುದು ಖಂಡನೀಯ’ ಎಂದೂ ದೂರಿದ್ದಾರೆ.
‘ಪ್ರಕಾಶ ಹುಕ್ಕೇರಿ ಅವರ ಮೇಲೆ ‘ಪ್ರಜಾಪ್ರತಿನಿಧಿ ಕಾಯ್ದೆ’ ಅಡಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಈ ಪರಿಷತ್ ಚುನಾವಣೆಯಿಂದ ಅವರನ್ನು ವಜಾಗೊಳಿಸಬೇಕು ಎಂದೂ ಒತ್ತಾಯಿಸಿದ್ದಾರೆ