ಬೆಳಗಾವಿ: ವಿಧಾನ ಪರಿಷತ್ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಬಿರುಸುಗೊಂಡಿದ್ದು, ಈ ನಡುವೆ ಬಿಜೆಪಿ ಶಾಸಕ ಅನಿಲ್ ಬೆನಕೆ ಮತ್ತೆ ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ.
ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿರುವ ಮತಗಟ್ಟೆಗೆ ಆಗಮಿಸಿದ ಶಾಸಕ ಅನಿಲ್ ಬೆನಕೆ ಮತಗಟ್ಟೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ ಅಲ್ಲದೇ ಮೊಬೈಲ್ ನಲ್ಲಿಯೂ ಮಾತನಾಡಿದ್ದಾರೆ. ಈ ಮೂಲಕ ಶಾಸಕರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.
ಮತಗಟ್ಟೆಗೆ ಮೊಬೈಲ್ ಫೋನ್ ನಿಷೇಧಿಸಲಾಗಿದೆಯಲ್ಲದೇ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೋವಿಡ್ ನಿಯಮಗಳನ್ನು ಪಾಲಿಸಿ ಮತದಾನ ಮಾಡಬೇಕು ಎಂದು ಸೂಚಿಸಲಾಗಿದೆ. ಆದರೆ ಮಾಸ್ಕ್ ಇಲ್ಲದೇ, ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತ ಮತಗಟ್ಟೆಗೆ ಆಗಮಿಸಿದ ಶಾಸಕರು, ಮತಗಟ್ಟೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಮತದಾರರನ್ನು ಸೆಳೆಯುವ ಯತ್ನ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.